ಬಾಯಲ್ಲಿ ಭೀಮವಾದ, ಮನೆಯಲ್ಲಿ ಕೋಮುವಾದ ಜಪ ಮಾಡುವವರು ಅಂಬೇಡ್ಕರ್ ಅನುಯಾಯಿಗಳಲ್ಲ: ಜ್ಞಾನಪ್ರಕಾಶ ಸ್ವಾಮೀಜಿ
ಚಿಕ್ಕಮಗಳೂರು: ಬಾಯಲ್ಲಿ ಭೀಮವಾದ ಮನೆಯಲ್ಲಿ ಮನುವಾದ ಭಜನೆ ಮಾಡುವವರು ಅಂಬೇಡ್ಕರ್ ಅನುಯಾಯಿಗಳಾಗಲು ಸಾಧ್ಯವೇ ಇಲ್ಲ. ಇಂತವರು ಇದ್ದೂ ಸತ್ತಂತೆ, ಇಂತವರಿಂದ ಅಂಬೇಡ್ಕರ್ ಕನಸು ನನಸು ಮಾಡಲು ಸಾಧ್ಯವಿಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕೆಎಸ್ಸಾರ್ಟಿಸಿ ಸಂಸ್ಥೆಯ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಶ್ರೇಯೋಭಿವೃದ್ಧಿ ಸಂಘ ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಅಂಬೇಡ್ಕರ್ ಸಂವಿಧಾನದ ಹಕ್ಕುಗಳ ಫಲಾನುಭವಿಗಳಾಗಿ ಉನ್ನತ ಸ್ಥಾನ ಪಡೆದವರು ತಮ್ಮ ಸಮುದಾಯದವರನ್ನು ತಿರುಗಿ ನೋಡಬೇಕು. ಕೈಲಾದ ಸಹಾಯ ಮಾಡಬೇಕು. ಅಂಬೇಡ್ಕರ್ ಅವರಂತಾಗಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ಮಾಡಬೇಕು. ಆಗ ಮಾತ್ರ ಅಂಬೇಡ್ಕರ್ ಜಯಂತಿ ಅರ್ಥ ಬರುತ್ತದೆ" ಎಂದು ಹೇಳಿದರು.
ಅಂಬೇಡ್ಕರ್ ಅವರು ಒಂದು ಜಾತಿ, ಒಂದು ಧರ್ಮದವರಿಗಾಗಿ ಸಂವಿಧಾನ ಬರೆದಿಲ್ಲ. ದೇಶದ ಪ್ರತೀ ಜಾತಿ, ಧರ್ಮದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಏಳಿಗೆಗಾಗಿ ದೂರಾಲೋಚನೆಯಿಂದ ಸಂವಿಧಾನವನ್ನು ಬರೆದಿದ್ದಾರೆ. ಈ ಕಾರಣಕ್ಕೆ ಯಾವುದೋ ಒಂದು ಜಾತಿ, ಒಂದು ಧರ್ಮದವರು ಅಂಬೇಡ್ಕರ್ ಜಯಂತಿ ಆಚರಿಸುವುದರಿಂದ ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸಲು ಸಾಧ್ಯವಿಲ್ಲ. ಎಲ್ಲ ಜಾತಿ, ಧರ್ಮದವರು ಒಗ್ಗೂಡಿ ಜಯಂತಿ ಆಚರಿಸುವುದರಿಂದ ಮಾತ್ರ ಅವರನ್ನು ಸದಾಕಾಲ ಜೀವಂತವಾಗಿರಿಸಲು ಸಾಧ್ಯ ಎಂದರು.
ರಾಷ್ಟ್ರಭವನದಿಂದ ಹಿಡಿದು ಗ್ರಾಮಪಂಚಾಯತ್‍ವರೆಗಿನ ಎಲ್ಲ ಜಾತಿ, ಧರ್ಮದವರಿಗೆ, ಬಡವ, ಶ್ರೀಮಂತ, ಮಹಿಳೆ ಎನ್ನದೇ ಎಲ್ಲರಿಗೂ ಮತದಾನ ಮಾಡುವ ಹಕ್ಕು ನೀಡಿದವರು ಅಂಬೇಡ್ಕರ್. ಈ ಕಾರಣಕ್ಕಾಗಿಯಾದರೂ ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ನೆನೆಯಲೇಬೇಕು ಎಂದು ಹೇಳದಿರು.
ಬಾಯಿಯಲ್ಲಿ ಭೀಮವಾದ, ಮನೆಯಲ್ಲಿ ಮನುವಾದದ ಜಪ ಮಾಡುವವರು ಅಂಬೇಡ್ಕರ್ ಅನುಯಾಯಿಗಳಲ್ಲ, ಅವರಿಂದ ಅಂಬೇಡ್ಕರ್ ಕನಸು ಸಾಕಾರ ಮಾಡಲು ಸಾಧ್ಯವಿಲ್ಲ. ನಾವು ಬಿಜೆಪಿ, ಜೆಡಿಎಸ್, ಕಾಂಗ್ರೆಸ್‍ನಂತಹ ಯಾವುದೇ ಪಕ್ಷಗಳ ಅಂಬೇಡ್ಕರ್‌ಗಳಾಗಬಾರದು. ಗುಲಾಮಗಿರಿಯಿಂದ ಹೊರ ಬಂದು ಸಮುದಾಯಕ್ಕೆ ಧಕ್ಕಬೇಕಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಾನತೆಯನ್ನು ಸಕಾರ ಮಾಡುವ ನಿಜವಾದ ಅಂಬೇಡ್ಕರ್ ಆಗಬೇಕು ಎಂದರು.
ಪಕ್ಷಗಳ ಹಿತಕ್ಕಾಗಿ ಬದುಕದೇ ಅಂಬೇಡ್ಕರ್ ಅವರಂತೆ ಸಮುದಾಯದ ಹಿತಕ್ಕಾಗಿ ಬದುಕಬೇಕು. ಇದಕ್ಕಾಗಿ ಅಂಬೇಡ್ಕರ್ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ನಮ್ಮ ಮಕ್ಕಳು, ಯುವಜನತೆಗೆ ಅಂಬೇಡ್ಕರ್ ಬದುಕಿನ ಬಗ್ಗೆ ದಿನನಿತ್ಯ ಹೇಳಬೇಕು. ಅವರಂತೆ ಬದುಕಲು ಕಲಿಸಬೇಕು. ಹೀಗಾದಲ್ಲಿ ಭವಿಷ್ಯದಲ್ಲಿ ಅಂಬೇಡ್ಕರ್ ಕನಸಿನ ಭಾರತ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಮಾಜಿ ಸಚಿವ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಬಿ.ಬಿ.ನಿಂಗಯ್ಯ ಮಾತನಾಡಿ, ಶೋಷಿತ, ಧಮನಿತರ ಪಾಲಿನ ಸೂರ್ಯ ಅಂಬೇಡ್ಕರ್ ಆಗಿದ್ದಾರೆ. ಶೋಷಿತ ಸಮುದಾಯಗಳ ಸ್ವಾತಂತ್ರ್ಯ, ಸಮಾನತೆಗಾಗಿ ಅವರು ತಮ್ಮ ಜೀವನನ್ನೇ ಮುಡಿಪಾಗಿಟ್ಟಿದ್ದರು ಎಂದರು
ಪ್ರಗತಿಪರ ಚಿಂತಕ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಗುಲಾಮಗಿರಿಗೆ ತಳ್ಳಿದ್ದ ಸಮುದಾಯದವರಿಗೆ ನಾಗರಿಕ ಹಕ್ಕುಗಳನ್ನು ಕೊಡಿಸಲು ಜೀವನ ಮುಡಿಪಾಗಿಟ್ಟ ಸಂತ ಅಂಬೇಡ್ಕರ್. ಅವರ ಕನಸಿನ ಭಾರತ ನಿರ್ಮಾಣಕ್ಕೆ ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರದೊಂದಿಗೆ ಹೋರಾಡಬೇಕು ಎಂದರು.
ಕೆಎಸ್ಸಾರ್ಟಿಸಿ ಎಸ್ಸಿ, ಎಸ್ಟಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರವೀಂದ್ರ, ಜಿಲ್ಲಾಧ್ಯಕ್ಷ ಉಮೇಶ್, ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ವಿಭಾಗದ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿದರು. ವಕೀಲ ಅನಿಲ್‍ಕುಮಾರ್ ಸಂವಿಧಾನದ ಪೀಠಿಕೆ ಭೋಧಿಸಿದರು. ಸಂಘದ ಗೌರವಾಧ್ಯಕ್ಷ ಎಚ್.ರಾಮಚಂದ್ರ, ಸಂಘದ ರಾಜ್ಯ ಖಜಾಂಚಿ ರೇಣುಕಾ, ಸಿಪಿಐ ಪಕ್ಷದ ರಾಧಸುಂದರೇಶ್, ಮುಖಂಡರಾದ ಕಾವ್ಯಾ ಸಂತೋಷ್ ವೇದಿಕೆಯಲ್ಲಿದ್ದರು. ದಲಿತ, ಕಾರ್ಮಿಕ, ಪ್ರಗತಿಪರ ಹೋರಾಟಗಾರರಾದ ಕೆ.ಟಿ.ರಾಧಾಕೃಷ್ಣ, ಮರ್ಲೆ ಅಣ್ಣಯ್ಯ, ಎಚ್.ಲಕ್ಷ್ಮಣ್, ನಾಗರಾಜ್. ಕೆ.ಮಂಜು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.