ಹಿರಿಯರು - ಸ್ಥಾನಕ್ಕೆ ಯಾವ ಗೌರವ ಕೊಡಬೇಕು, ಆ ಗೌರವವನ್ನು ಕೊಡಲೇಬೇಕು: ಬಿಜೆಪಿ ನಾಯಕ ಸಿ.ಟಿ.ರವಿ
"ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ"
ಅನಂತಕುಮಾರ್ ಹೆಗಡೆ/ ಸಿ.ಟಿ ರವಿ
ಚಿಕ್ಕಮಗಳೂರು: ಹಿರಿಯರು ಮತ್ತು ಸ್ಥಾನಕ್ಕೆ ಯಾವ ಗೌರವ ಕೊಡಬೇಕು. ಆ ಗೌರವವನ್ನು ಕೊಡಲೇಬೇಕು. ಅನಂತಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಿದೆ ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ಮಾಜಿ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ನಾವು ಸಮರ್ಥಿಸುವುದಿಲ್ಲ. ರಾಮ ಎಲ್ಲರನ್ನೂ ಜೊಡಿಸಿಕೊಂಡು ಹೋಗುವವನು ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಹೇಳಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.
ಭಾರತೀಯ ಮುಸ್ಲಿಮರು ದಾಳಿಕೋರರ ಜತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳು ವುದಿಲ್ಲ. ಭಾರತೀಯತೆ ಸನಾತನ ಪರಂಪರೆಯ ಮೇಲೆ ವಿಶ್ವಾಸವಿಟ್ಟು ಇಲ್ಲಿ ಉಳಿದು ಕೊಂಡಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅವರಿಗೂ ಮನ ಪರಿವರ್ತನೆಯ ದಿನ ಬರಬಹುದು. ಆಕ್ರಮಣ ಮಾಡಿ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡಿ ಕಟ್ಟಿದ ಮಸೀದಿಯಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಆಗುತ್ತದೆ ಎಂದು ಅನಿಸಬಹುದು. ಅಂದು ಅವರು ಉದಾರತೆಯನ್ನು ಪ್ರದರ್ಶನ ಮಾಡಬಹುದು ಎಂದರು.
ಇಲ್ಲಿ ಘಜ್ನಿ, ಘೋರಿ ಮೊಗಲ್ ಜತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ ಅದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅದರ ವಿರುದ್ದ ನಮ್ಮ ಭಾವನೆಗಳು ಇವೆ. ಎಲ್ಲಾ ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಿಲ್ಲ ಎಂದರು.
ಯಾರಿಗೆ ಆಗಲಿ ಏಕವಚನದಲ್ಲಿ ಮಾತನಾಡುವುದನ್ನು, ಅಗೌರವ ತರುವುದನ್ನು ಒಪ್ಪಿಕೊಳ್ಳುವುದಿಲ್ಲ. ಅನಂತಕುಮಾರ್ ಹೆಗಡೆ ಅವರು ಹೀಗೆ ಹೇಳಿದರು ಎಂದು ಹೇಳಿ ಅವರನ್ನು ಟೀಕೆ ಮಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ನಾಯಿಗೆ ಹೋಲಿಸಿರುವುದು ಕೂಡ ತಪ್ಪೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಅವರನ್ನು ಏಕ ವಚನದಲ್ಲಿ ಮಾತನಾಡುವುದು, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೀಯಾಳಿದ್ದಾರೆ ಅದು ಕೂಡ ತಪ್ಪೇ. ಹಿರಿಯರಾಗಿ ಗೌರವ ನೀಡಬೇಕು ಆಗ ಉಳಿದವರಿಗೆ ಮಾದರಿಯಾಗುತ್ತಾರೆ ಎಂದರು.
ಇದೇ ವೇಳೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆ ಮೇರೆಗೆ ದೇವಾಲಯಗಳ ಸ್ವಚ್ಛತ ಕಾರ್ಯ ನಡೆಸುತ್ತಿದ್ದು, ಮಂಗಳವಾರ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡರು. ಪ್ರಧಾನಿಯವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.