ಚಿಕ್ಕಮಗಳೂರು: ವಿದ್ಯುತ್ ಕಂಬ ಏರಿ ದೋಷ ಸರಿಪಡಿಸಲು ಮುಂದಾದ ರೈತ ವಿದ್ಯುತ್ ತಗುಲಿ ಮೃತ್ಯು
ಚಿಕ್ಕಮಗಳೂರು: ವಿದ್ಯುತ್ ಕಂಬದಲ್ಲಿದ್ದ ದೋಷ ಸರಿಪಡಿಸಲು ಯುವ ರೈತನೊಬ್ಬ ವಿದ್ಯುತ್ ಕಂಬ ಏರಿ ದುರಸ್ತಿ ಮಾಡಲು ಮುಂದಾಗಿದ್ದ ವೇಳೆ ರೈತನಿಗೆ ವಿದ್ಯುತ್ ಪ್ರವಹಿಸಿ ವಿದ್ಯುತ್ ಕಂಬದಲ್ಲೇ ಮೃತಪಟ್ಟ ಘಟನೆ ರವಿವಾರ ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ಮಲ್ಲಿಗೆಹಳ್ಳಿ ಗ್ರಾಮದ ರೈತ ಮಂಜುನಾಥ್(35) ಎಂದು ಗುರುತಿಸಲಾಗಿದೆ. ರವಿವಾರ ಮಧ್ಯಾಹ್ನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಸ್ತಗಿತಗೊಂಡಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಇದ್ದರೂ ತಮ್ಮ ಗ್ರಾಮದಲ್ಲಿ ವಿದ್ಯುತ್ ಹಲವು ಗಂಟೆ ಕಳೆದರೂ ವಿದ್ಯುತ್ ಬಾರದಿರುವುದನ್ನು ಗಮನಿಸಿದ ರೈತ ಮಂಜುನಾಥ್ ವಿದ್ಯುತ್ ಕಂಬದಲ್ಲಿಯೇ ಏನೋ ದೋಷವಿದೆ ಎಂದು ಭಾವಿಸಿ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಕರೆ ಮಾಡದೇ, ಗ್ರಾಮದಲ್ಲಿದ್ದ ವಿದ್ಯುತ್ ಕಂಬವನ್ನು ಖುದ್ದು ಏರಿದ್ದಾರೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮಂಜುನಾಥ್ ಮೈಗೆ ಬೆಂಕಿ ಹೊತ್ತಿಕೊಂಡು ಕಂಬದಲ್ಲೇ ಒದ್ದಾಡುತ್ತಾ, ಕಿರುಚಾಡುತ್ತಲೇ ಮೃತಪಟ್ಟಿದ್ದಾರೆ.
ಗ್ರಾಮಸ್ಥರು, ಪೊಲೀಸರು, ಮೆಸ್ಕಾಂ ಸಿಬ್ಬಂದಿಗೆ ಸುದ್ದಿ ಮಟ್ಟಿಸಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ಮಂಜುನಾಥ್ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಈ ವೇಳೆ ಮಂಜುನಾಥ್ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.