ಬಾಬಾ ಬುಡನ್ ದರ್ಗಾ ಸಮೀಪದ ಗಿರಿಶ್ರೇಣಿಯಲ್ಲಿ ಬೆಂಕಿ ; ನೂರಾರು ಎಕರೆ ಹುಲ್ಲುಗಾವಲು ಬೆಂಕಿಗಾಹುತಿ
ಚಿಕ್ಕಮಗಳೂರು: ಬಾಬಾಬುಡನ್ ದರ್ಗಾ ಸಮೀಪದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಹುಲ್ಲುಗಾವಲು, ಶೋಲಾ ಕಾಡು ಸುಟ್ಟು ಹೋಗಿರುವ ಘಟನೆ ಸೋಮವಾರ ವರದಿಯಾಗಿದೆ.
ಮಂಗಳವಾರ ಬಾಬಾ ಬುಡನ್ ದರ್ಗಾದ ಆವರಣದಲ್ಲಿ ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಉರೂಸ್‍ಗೂ ಮುನ್ನಾ ದರ್ಗಾದ ಸಮೀಪದಲ್ಲೇ ಕಿಡಿಗೇಡಿಗಳು ಹಸಿರಿನಿಂದ ಕೂಡಿದ್ದ ಬೆಟ್ಟಗಳ ಸಾಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ದರ್ಗಾದ ಸಮೀಪದಲ್ಲಿ ನೂರಾರು ಎಕರೆಗೆ ಬೆಂಕಿ ವ್ಯಾಪಿಸಿ ಗಿರಿಶ್ರೇಣಿಯಲ್ಲಿದ್ದ ಹುಲ್ಲುಗಾವಲು ಹಾಗೂ ಅಪರೂಪದ ಶೋಲಾ ಕಾಡು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದು, ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಗೊತ್ತಾಗಿದೆ.
ಉರೂಸ್ ಹಿನ್ನೆಲೆಯಲ್ಲಿ ದರ್ಗಾಕ್ಕೆ ಪೊಲೀಸರ ಭದ್ರತೆ ಒದಗಿಸಿದ್ದು, ಪೊಲೀಸರು ಕಣ್ಗಾವಲಿನ ಮಧ್ಯೆಯೂ ಕಿಡಿಗೇಡಿಗಳು ಗಿರಿಶ್ರೇಣಿಗೆ ಬೆಂಕಿ ಹಾಕಿದ್ದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದ್ದು, ಪ್ರವಾಸಕ್ಕೆ ಬಂದ ಕಿಡಿಗೇಡಿಗಳು ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.