ಕಾಫಿನಾಡಲ್ಲಿ ವಿದೇಶಿ ವಿಂಟೇಜ್ ಕಾರುಗಳ ಕಲರವ
ಚಿಕ್ಕಮಗಳೂರು: ಕಾಫಿನಾಡಿನ ರಸ್ತೆಗಳಲ್ಲಿ ಅಪರೂಪದ ದೇಶಿ-ವಿದೇಶಗಳ ವಿಂಟೇಜ್ ಕಾರುಗಳು ನೋಡುಗರನ್ನು ಆಕರ್ಷಿಸುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದರೆ, ಯುವಸಮೂಹಕ್ಕೆ ವಿಂಟೇಜ್ ಕಾರುಗಳು ವಿಭಿನ್ನ ರೀತಿಯ ಅನುಭವಗಳನ್ನು ನೀಡಿದವು.
ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಬೆಲ್ಜಿಯಂ, ಇಟಲಿ, ಜರ್ಮನಿ ದೇಶಗಳ ಪೋರ್ಶೆ, ಬೆಂಝ್, ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್ ರಾಯ್ಸ್ ಸೇರಿದಂತೆ 50ರಿಂದ 90ವರ್ಷ ಹಳೆಯ 20ಕ್ಕೂ ಹೆಚ್ಚು ವೆಂಟೇಜ್ ಕಾರುಗಳು ದಕ್ಷಿಣ ಭಾರತದ ಪ್ರವಾಸಕ್ಕೆ ಆಗಮಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಸವನ್ನು ಕೈಗೊಂಡ ವಿಂಟೇಜ್ ಕಾರುಗಳು ಹುಬ್ಬಳ್ಳಿ, ಹಂಪಿಯ ಪ್ರವಾಸವನ್ನು ಮುಗಿಸಿ ಕಾಫಿನಾಡಿನ ಸ್ವಿಲ್ವರ್ ಸೈ ರೆಸಾರ್ಟ್‍ನಲ್ಲಿ ತಂಗಿದ ಬಳಿಕ ಸೋಮವಾರ ಮಡಿಕೇರಿ ಜಿಲ್ಲೆಗೆ ಪ್ರವಾಸ ಬೆಳೆಸಿದವು. ಚಿಕ್ಕಮಗಳೂರು ಪ್ರವಾಸ ಮುಗಿಸಿ ಮಡಿಕೇರಿ, ಮೈಸೂರಿನ ಮೂಲಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.
ರೆಸಾರ್ಟ್ ಮಾಲಕ ಚೇತನ್ ಮಾತನಾಡಿ, ವಿಂಟೇಜ್ ಕಾರುಗಳ ತಂಡಗಳು ಪ್ರತಿವರ್ಷವು ಭಾರತಾದ್ಯಂತ ಪ್ರವಾಸ ಕೈಗೊಳ್ಳುತ್ತವೆ. ಈ ಬಾರಿಯು ದಕ್ಷಿಣ ಭಾರತ ಪ್ರವಾಸಕೈಗೊಂಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಂಟೇಜ್ ಕಾರುಗಳ ಪ್ರವಾಸಕ್ಕೆ ಸಚಿವ ಎಚ್‍ಕೆ.ಪಾಟೀಲ್ ಚಾಲನೆ ನೀಡಿದ್ದಾರೆ. ಈ ಕಾರುಗಳು ರಾಜ್ಯದ ಅನೇಕ ಜಿಲ್ಲೆಗಳ ಪ್ರವಾಸ ಮುಗಿಸಿ ಕಾಫಿನಾಡಿಗೆ ಬಂದಿರುವುದು ಖುಷಿಯ ಸಂಗತಿ ಎಂದರು.
ನೂರಾರು ವರ್ಷಗಳ ವಿಂಟೇಜ್ ಕಾರುಗಳನ್ನು ಅಲ್ಲಲ್ಲಿ ಏರ್ಪಡಿಸುವ ಪ್ರದರ್ಶನದಲ್ಲಿ ಗಮನಿಸಿದ್ದೇವೆ. ಆದರೆ ಸಂಚರಿಸುವುದನ್ನು ಇದೇ ಮೊದಲು ಕಂಡಿದ್ದೇವೆ. ತಂತ್ರಜ್ಞಾನ ವೃದ್ಧಿಗೊಂಡಂತೆ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ 90 ವರ್ಷಗಳ ಇತಿಹಾಸವುಳ್ಳ ಪುರಾತನ ಕಾರುಗಳು ನೋಡಲು ಸಿಗುವುದು ಅಪರೂಪ. ಇಂತಹ ಕಾರುಗಳು ಸದ್ಯ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ವಿಂಟೇಜ್ ಕಾರುಗಳನ್ನು ನೋಡುವುದೇ ಒಂದು ಹೊಸ ಅನುಭವ. ರಾಜ್ಯದ ಜನರು ಇಂತಹ ಕಾರುಗಳನ್ನು ಕಣ್ಣಾರೆ ಕಂಡು ಆನಂದಿಸಲು ಈ ಪ್ರವಾಸ ಸಹಕಾರಿಯಾಗಿದೆ ಎಂದರು.
ಈ ವೇಳೆ ವಿಂಟೇಜ್ ಕಾರುಗಳ ವಿದೇಶಿ ಪ್ರವಾಸಿಗರು ಮಾತನಾಡಿ, ಭಾರತದ ರಸ್ತೆಗಳು ವಿಭಿನ್ನ ಅನುಭವವನ್ನು ನೀಡುತ್ತಿವೆ. ಎತ್ತರ, ಇಳಿಜಾರಿನಿಂದ ಕೂಡಿದ ರಸ್ತೆಗಳಲ್ಲಿ ಪ್ರಯಾಣ ಬೆಳೆಸುವುದು ಹೊಸ ಅನುಭವ ನೀಡುತ್ತಿವೆ ಎಂದರು.