ಶೃಂಗೇರಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ | ಬಾಲಕಿಯ ತಾಯಿ ಸೇರಿ ಮೂವರು ಯುವಕರು ದೋಷಿ: 49 ಮಂದಿ ಖುಲಾಸೆ
ಹಣಕ್ಕಾಗಿ ಮಗಳನ್ನೇ ವೇಶ್ಯವಾಟಿಕೆಗೆ ದೂಡಿದ್ದ ತಾಯಿ!
ಚಿಕ್ಕಮಗಳೂರು: ಮೂರು ವರ್ಷಗಳ ಹಿಂದೆ ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಜಿಲ್ಲೆಯ ತ್ವರಿತ ಪೊಕ್ಸೊ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ಸಂತ್ರಸ್ಥೆಯ ತಾಯಿ ಸೇರಿದಂತೆ ಮೂವರು ಯುವಕರನ್ನು ದೋಷಿಗಳೆಂದು ತೀರ್ಪು ನೀಡಿರುವ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಗಳಾಗಿದ್ದ 49 ಮಂದಿಯನ್ನು ಖುಲಾಸೆಗೊಳಿಸಿ ಆದೇಶಿಸಿದೆ.
ಸಂತ್ರಸ್ಥ ಬಾಲಕಿಯ ತಾಯಿ ಗೀತಾ ಹಾಗೂ ಸ್ಮಾಲ್ ಅಭಿ, ಗಿರೀಶ್, ಚರಣ್ ಎಂಬವರನ್ನು ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ಪ್ರಕರಣದ ಆರೋಪಿಗಳು ಹಾಗೂ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ ಗೀತಾ ಅವರ ಶಿಕ್ಷೆಯ ಪ್ರಮಾಣ ಮಾ.11ಕ್ಕೆ ಪ್ರಕಟವಾಗಲಿದೆ.
ಏನಿದು ಘಟನೆ: ಜಿಲ್ಲೆಯ ಶೃಂಗೇರಿಯಲ್ಲಿ ಎಸೆಸೆಲ್ಸಿ ಓದುತ್ತಿದ್ದ 15 ವರ್ಷದ ಶಾಲಾ ಬಾಲಕಿ ತನ್ನ ತಾಯಿಯೊಂದಿಗೆ ತಾಲೂಕಿನ ಗೋಚವಳ್ಳಿ ಗ್ರಾಮದಲ್ಲಿರುವ ಕ್ರಷರ್ ವೊಂದರಲ್ಲಿ ವಾಸವಿದ್ದರು. ಈ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಕಳೆದ 2021 ರ ಜ.30ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಬಾಲಕಿಯೊಂದಿಗಿದ್ದ ಮಹಿಳೆ ಗೀತಾ ಸೇರಿದಂತೆ ಸ್ಮಾಲ್ ಅಭಿ, ಚರಣ್, ಗಿರೀಶ್ ಎಂಬ ಆರೋಪಿಗಳನ್ನು ಆರಂಭದಲ್ಲಿ ಬಂಧಿಸಲಾಗಿತ್ತು ಎನ್ನಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದು, ಶೃಂಗೇರಿ ಠಾಣೆಯ ಠಾಣಾಧಿಕಾರಿ ಪ್ರಕರಣ ಮುಚ್ಚಿಹಾಕುತ್ತಿದ್ದಾರೆ ಎಂಬ ಆರೋಪವೂ ಅಂದು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿಯನ್ನು ಅಮಾನತು ಮಾಡಿ, ಪ್ರಕರಣದ ತನಿಖೆಯನ್ನು ಅಂದಿನ ಎಎಸ್ಪಿ ಆಗಿದ್ದ ಶೃತಿ ಅವರಿಗೆ ವಹಿಸಲಾಗಿತ್ತು ಎಂದು ತಿಳಿದು ಬಂದಿದೆ.
ಎಎಸ್ಪಿ ಎಸ್.ಶೃತಿ ನೇತೃತ್ಬದ ಪೊಲೀಸರ ತಂಡ ಬಾಲಕಿ ಅತ್ಯಾಚಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ನೂರಾರು ಮಂದಿಯನ್ನು ವಿಚಾರಣೆಗೊಳಪಡಿಸಿತ್ತು. ನಂತರ 53 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ವಿಚಾರಣಾ ಹಂತದಲ್ಲಿದ್ದ ಬಾಲಕಿ ಅತ್ಯಾಚಾರ ಪ್ರಕರಣದ ಬಗ್ಗೆ ಜಿಲ್ಲಾ ತ್ವರಿತ ಪೊಕ್ಸೊ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದ್ದು, ಬಾಲಕಿ ತಾಯಿ ಸೇರಿದಂತೆ ಮೂವರು ಯುವಕರನ್ನು ದೋಷಿಗಳೆಂದು ತೀರ್ಪು ನೀಡಿದೆ. ತಪ್ಪಿತಸ್ಥರ ಶಿಕ್ಷೆಯ ಪ್ರಮಾಣವನ್ನು ಮಾ.11ಕ್ಕೆ ಪ್ರಕಟವಾಗಲಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ 49 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ: ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಕಿಯೊಂದಿಗೆ ವಾಸವಿದ್ದ ಮಹಿಳೆಯನ್ನು ಬಂಧಿಸಲಾಗಿತ್ತು. ಈ ವೇಳೆ ಆಕೆ ತಾನು ಬಾಲಕಿಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದಳು. ಆದರೆ ಪೊಲೀಸರ ತನಿಖೆಯಲ್ಲಿ ಆಕೆ ಚಿಕ್ಕಮ್ಮ ಅಲ್ಲ, ತಾಯಿ ಎಂಬುದು ದೃಢಪಟ್ಟಿತ್ತು. ಕ್ರಷರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೀತಾ ಹಣಕ್ಕಾಗಿ ಮಗಳನ್ನು ವೇಶ್ಯಾವಾಟಿಕೆಗೆ ದೂಡಿರುವುದು ಹಾಗೂ ಈಕೆಗೆ ಸ್ಮಾಲ್ ಅಭಿ, ಚರಣ್, ಗಿರೀಶ್ ಎಂಬ ಸ್ಥಳೀಯ ಯುವಕರು ನೆರವಾಗಿದ್ದರು ಎನ್ನಲಾಗುತ್ತಿದೆ. ತಾಯಿಯ ಕಿರುಕುಳದಿಂದಾಗಿಯೇ ಬಾಲಕಿ ವೇಶ್ಯಾವಾಟಿಕೆಗಿಳಿದಿದ್ದಳು ಎಂದು ತಿಳಿದು ಬಂದಿದೆ.