ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳ ಜಾರಿಗೆ ಶಾಶ್ವತ ಅನುಷ್ಠಾನ ಸಮಿತಿ ರಚಿಸಲು ಸರಕಾರ ಮುಂದಾಗಲಿ : ಗೊರುಚ ಆಗ್ರಹ
ಚಿಕ್ಕಮಗಳೂರು : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ರಾಜ್ಯ ಸರಕಾರ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಶಾಶ್ವತ ಅನುಷ್ಠಾನ ಸಮಿತಿಯನ್ನು ನೇಮಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಆದರೆ, ಸಮ್ಮೇಳನದಲ್ಲಿ ಕೈಗೊಂಡ ಬಹುತೇಕ ನಿರ್ಣಯಗಳನ್ನು ಸರಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿವೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿವೆ. ಈ ಆರೋಪ ನೂರಕ್ಕೆ ನೂರು ಸತ್ಯ. ಸಮ್ಮೇಳನದಲ್ಲಿ ಕೈಗೊಂಡ ಯಾವುದೇ ನಿರ್ಣಯಗಳನ್ನು ರಾಜ್ಯ ಸರಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಉದಾಹರಣೆ ಇಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷನಾಗಿದ್ದ ವೇಳೆ ತಾನು ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಅನುಷ್ಠಾನ ಸಮಿತಿಯೊಂದನ್ನು ರಚಿಸಿದ್ದೆ. ಈ ಸಮಿತಿ ಒಂದಿಷ್ಟು ಕೆಲಸ ಮಾಡಿದೆಯಾದರೂ ನನ್ನ ಅಧಿಕಾರವಧಿ ಪೂರ್ಣಗೊಂಡ ಬಳಿಕ ನಿಷ್ಕ್ರಿಯವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ನಾಡು, ನುಡಿಗೆ ಪೂರಕವಾದ ನಿರ್ಣಯಗಳಾಗಿರುತ್ತವೆ. ಇಂತಹ ನಿರ್ಣಯಗಳನ್ನು ಸರಕಾರಗಳು ನಿರ್ಲಕ್ಷಿಸಿಸುವುದು ಸರಿಯಲ್ಲ. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇನ್ನಾದರೂ ಶಾಶ್ವತ ಅನುಷ್ಠಾನ ಸಮಿತಿಯನ್ನು ನೇಮಿಸಬೇಕೆಂದು ಅವರು ಅಭಿಪ್ರಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಬಾಗಿಲು ಹಾಕುತ್ತಿವೆ, ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೊರುಚ, ಈ ವಿಚಾರದಲ್ಲಿ ಪೋಷಕರ ತಪ್ಪೇನೂ ಇಲ್ಲ. ತಪ್ಪಿರುವುದು ಸರಕಾರದ್ದು. ಇದು ಸ್ಪರ್ಧಾತ್ಮಕಯುಗ, ಈ ಕಾಲದಲ್ಲಿ ಉದ್ಯೋಗದ ಅಭದ್ರತೆ ಎಲ್ಲರನ್ನೂ ಕಾಡುತ್ತಿದೆ. ಉದ್ಯೋಗಕ್ಕಾಗಿ ಆಂಗ್ಲ ಮಾಧ್ಯಮ ಕಲಿಯಲೇಬೇಕೆಂಬ ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ವ್ಯವಹಾರ, ಉದ್ಯೋಗಕ್ಕಾಗಿ ಇಂಗ್ಲಿಷ್ ಅನಿವಾರ್ಯವೂ ಹೌದು. ಪೋಷಕರ ಈ ಆತಂಕ ದೂರ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡಿ, ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್‌ಅನ್ನು ತುರುಕುವ ಕೆಲಸ ಮಾಡದೆ, ಪ್ರಾಥಮಿಕ ಶಿಕ್ಷಣದ ಬಳಿಕ ಇಂಗ್ಲಿಷ್ ಕಲಿಸಲು ಸರಕಾರ ಒತ್ತು ನೀಡಬೇಕು. ವಿಶೇಷ ತರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯಂತಹ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಹೇಳಿದರು.
ಚಿಕ್ಕಮಗಳೂರು ಮೂಲದ ಸಾಹಿತಿಗಳಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವ ಗೌರವ ಇದುವರೆಗೆ ಸಿಕ್ಕಿರಲಿಲ್ಲ. ತನಗೆ ಈ ಗೌರವ ಸಿಕ್ಕಿದೆ. ಜಿಲ್ಲೆಯ ಬಯಲು ಭಾಗ ಜಾನಪದ ಕೆಲಗಳ ತವರೂರಾಗಿದೆ. ಇಂತಹ ಪ್ರದೇಶದಲ್ಲಿ ಬೆಳೆದ ತನಗೆ ಜಾನಪದದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ಅದೇ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಖ್ಯಾತನಾಮ ಸಾಹಿತಿಗಳ ಪರಿಚಯವಾಯಿತು. ಅವರ ಸಹವಾಸದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅಳಿಲು ಸೇವೆ ಮಾಡಿದ್ದೇನೆ. ಇದನ್ನು ಪರಿಗಣಿಸಿ ಈ ಗೌರವ ನೀಡಿದ್ದಾರೆ. ಮಂಡ್ಯದ ಜನತೆ ಹಾಗೂ ಕನ್ನಡಿಗರು ನನ್ನ ಅಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆಂದು ಗೊ.ರು.ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ ತಿಪ್ಪೇರುದ್ರಪ್ಪ, ಚಿಕ್ಕಮಗಳೂರು ಜಿಲ್ಲೆ ಹಲವಾರು ಖ್ಯಾನನಾಮ ಸಾಹಿತಿಗಳನ್ನು ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದೆ. ೮೬ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ಸಮ್ಮೇಳನದ ಅಧ್ಯಕ್ಷರಾಗಿ ಚಿಕ್ಕಮಗಳೂರು ಮೂಲದವರು ಆಯ್ಕೆಯಾಗದ ಕೊರತೆ ಇತ್ತು. ಗೊರುಚ ಮೂಲಕ ಈ ಕೊರತೆ ನೀಗಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗೊರುಚ ಕೊಡುಗೆ ಅಪಾರ ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ ಉಪಸ್ಥಿತರಿದ್ದರು.
‘ಆಹಾರ ವಿಚಾರದಲ್ಲಿ ನನ್ನ ತಕರಾರು ಇಲ್ಲ’:
ಮಾಂಸಾಹಾರ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೊರುಚ, ಪ್ರತೀ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಭಿಕರು ಮತ್ತು ಗಣ್ಯರಿಗೆ ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳಲು ಆಹಾರ ಸಮಿತಿ ಇರುತ್ತದೆ. ಯಾವ ಆಹಾರ, ತಿಂಡಿ, ಊಟ ನೀಡಬೇಕೆಂಬುದನ್ನು ಈ ಸಮಿತಿಯೇ ನಿರ್ಧರಿಸುತ್ತದೆ. ಅವರು ನೀಡುವ ಆಹಾರವನ್ನು ಸಮ್ಮೇಳದ ಅಧ್ಯಕ್ಷರೂ ಸೇರಿದಂತೆ ಸಭಿಕರು, ಗಣ್ಯರು ಸೇವಿಸುತ್ತಾರೆ. ಈ ಬಾರಿ ಮಾಂಸಾಹಾರ ನೀಡಬೇಕೆಂಬ ಕೂಗು ಎದ್ದಿದೆ. ಇಂತಹ ಭಿನ್ನಾಭಿಪ್ರಾಯ ಸಹಜ. ಆಹಾರದ ವಿಚಾರದಲ್ಲಿ ನನ್ನ ತಕರಾರು ಯಾವುದೂ ಇಲ್ಲ. ಆಹಾರ ಸಮಿತಿಯವರು ಊಟ ಕೊಡುತ್ತಾರೆ, ನಾವು ತಿನ್ನುತ್ತೇವೆ. ಇಂತದ್ದೇ ಬೇಕೆಂದು ನಾನು ಕೇಳುವುದಿಲ್ಲ ಎಂದು ಉತ್ತರಿಸಿದರು.
ಎಸ್.ಎಂ ಕೃಷ್ಣ ನಾಡಿನ ಧೀಮಂತ ರಾಜಕಾರಣಿ. ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಅವರು ಅಪಾರ ಅಭಿಮಾನ ಹೊಂದಿದ್ದರು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅವರಿಂದಲೇ ನಾನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದೆ. ವಾರ್ತಾ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆಯೂ ಅವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಸಾಪ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆಯೂ ತನಗೆ ಸಹಕಾರ ನೀಡಿದ್ದರು. ಮಂಡ್ಯ ಜಿಲ್ಲೆಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸ್ವಾಗತ ಸಮಿತಿ ಮಹಾ ಪೋಷಕರು ಆಗಿದ್ದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ.
ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ