ಮೂಡಿಗೆರೆ ಭಾಗದಲ್ಲಿರುವ 3 ಕಾಡಾನೆಗಳ ಸೆರೆಗೆ ಸರಕಾರ ಆದೇಶ; ಕಾರ್ಯಾಚರಣೆ ಆರಂಭ
ಕಾಡಾನೆ ದಾಳಿಯಿಂದ ಆನೆ ಕಾರ್ಯಪಡೆ ಸಿಬ್ಬಂದಿ ಮೃತ್ಯು ಘಟನೆ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಾರ್ವಜನಿಕ ಆಸ್ತಿನಾಶ ಮತ್ತು ಪ್ರಾಣಹಾನಿಗೆ ಕಾರಣವಾಗಿರುವ 3 ಪುಂಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರಕಾರ ಅನುಮತಿ ನೀಡಿದ್ದು, ಈಗಾಗಲೇ ಆನೆಗಳ ಪತ್ತೆಗೆ ಕೂಬಿಂಗ್ ಆರಂಭಗೊಂಡಿದೆ. ಕಾಡಾನೆ ಸೆರೆಗೆ ಅರ್ಜುನ್ ಸೇರಿದಂತೆ 6 ಕಾಡಾನೆಗಳು ಶುಕ್ರವಾರ ಕಾಫಿನಾಡಿಗೆ ಬಂದಿಳಿದಿವೆ.
ನ.22ರಂದು ಮೂಡಿಗೆರೆ ವೃತ್ತದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಕಾರ್ತಿಕ್ ಎಂಬವರು ಮೇಕನಗದ್ದೆಯ ದೊಡ್ಡಹೊಳ ಎಂಬಲ್ಲಿ ಆನೆಗಳನ್ನು ಹಿಮ್ಮೆಟ್ಟಿಸಲು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 32 ಆನೆಗಳು ಕಾರ್ಯಾಚರಿಸುತ್ತಿವೆ. ಕೆಲವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದರೆ, ಪುಂಡಾನೆಗಳಾಗಿರುವ ಒಂಟಿ ಸಲಗಗಳು ಆಹಾರ ಮತ್ತು ನೀರು ಸಿಗುವ ಸ್ಥಳದಲ್ಲಿ ಬೀಡುಬಿಡುತ್ತಿವೆ. ಕೆಲವು ದಿನಗಳಿಂದ ಆಲ್ದೂರು ಮಾರ್ಗವಾಗಿ ಮತ್ತಾವರ ಮತ್ತು ತೇಗೂರು ಕಾಡಿನಲ್ಲಿ ಒಟ್ಟು 7 ಆನೆಗಳು ಕಂಡು ಬಂದಿದ್ದು, ಅವುಗಳಲ್ಲಿ 2 ಆನೆಗಳು ಬೇರ್ಪಟ್ಟಿದ್ದವು. ಈ ಆನೆಗಳ ಗುಂಪಿನಲ್ಲಿ ಹೆಣ್ಣಾನೆಯೊಂದು ಮರಿಗೆ ಜನ್ಮನೀಡಿದ್ದು, ಮರಿಗಳ ಕಾರಣಕ್ಕೆ ಗಂಡು ಆನೆಗಳನ್ನು ಹೆಣ್ಣು ಆನೆಗಳು ಗುಂಪಿನಿಂದ ದೂರ ಕಳಿಸುತ್ತಿವೆ. ಹಾಗಾಗಿ ಬೇರ್ಪಟ್ಟ ಗಂಡಾನೆ ಏಕಾಂಗಿಯಾಗಿ ತಿರುಗುತ್ತಾ ಮನುಷ್ಯರ ಮೇಲೆ ಎರಗುತ್ತಿದ್ದು, ಇತ್ತೀಚಿಗೆ ಇಬ್ಬರು ಕಾರ್ಮಿಕರೂ ಸೇರಿದಂತೆ ಓರ್ವ ರೈತ ಮತ್ತು ಓರ್ವ ಅರಣ್ಯ ಇಲಾಖೆ ದಿನಗೂಲಿ ನೌಕರ ಜೀವಕಳೆದುಕೊಂಡಿದ್ದಾರೆ.
ಕಾಡಾನೆ ಹಿಡಿಯಲು ಕೆಲವೇ ದಿನಗಳ ಹಿಂದೆ ಅರ್ಜುನ್ ಸೇರಿದಂತೆ 7 ಕಾಡಾನೆಗಳು ಬಂದು ಕಾರ್ಯಾಚರಣೆ ನಡೆಸಿದ್ದು, ಒಂಟಿ ಸಲಗವೊಂದನ್ನು ಸೆರೆಹಿಡಿಯಲಾಗಿದೆ. ಆಲ್ದೂರಿನಲ್ಲಿ ಇಬ್ಬರು ಕಾರ್ಮಿಕರನ್ನು ಸಾಯಿಸಿದ್ದ ಪುಂಡಾನೆ ಮಾತ್ರ ಧಟ್ಟಕಾಡನ್ನು ಸೇರಿಕೊಂಡಿದೆ. ಮೂಡಿಗೆರೆಯ ಹೊಸಕೆರೆ ಗ್ರಾಮದಲ್ಲಿ ಅರಣ್ಯ ಇಲಾಕೆ ಸಿಬ್ಬಂದಿ ಕಾರ್ತಿಕ್ ಕಾಡಾನೆಗೆ ಬಲಿಯಾದ ಘಟನೆ ಬಳಿಕ ಆ ಭಾಗದಲ್ಲಿರುವ 3 ಕಾಡಾನೆಗಳನ್ನು ಸೆರೆಹಿಡಿಯಲು ಸರಕಾರ ಅನುಮತಿ ನೀಡಿದ್ದು, ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ಆರಂಭಗೊಂಡಿದೆ.