ಬಾಳೆಹೊನ್ನೂರು: ಭಾರೀ ಮಳೆ; ರಸ್ತೆ ಸಂಚಾರ ಅಸ್ತವ್ಯಸ್ತ
ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಕಳಸ ಬಾಳೆಹೊನ್ನೂರು ಸಂಪರ್ಕ ರಸ್ತೆ ಮೇಲೆ ಭಾರೀ ನೀರು ಹರಿದ ಪರಿಣಾಮ ಸುಮಾರು 3 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ಸೋಮವಾರ ನಡೆದಿದೆ. ಸೋಮವಾರ ಸಂಜೆ ಬಾಳೆಹೊನ್ನೂರು ಸಮೀಪದ ಮಾಗುಂಡಿ ಗ್ರಾಪಂ ವ್ಯಾಪ್ತಿಯ ಮಹಲ್ಗೋಡು ಎಂಬಲ್ಲಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ಬೆಟ್ಟ ಗುಡ್ಡಗಳಲ್ಲಿ ಬಿದ್ದ ಮಳೆ ನೀರು ಮಹಲ್ಗೋಡು ಗ್ರಾಮದಲ್ಲಿ ಹರಿಯುವ ಸಣ್ಣ ಹಳ್ಳಕ್ಕೆ ಬಂದಿದ್ದು, ಹಳ್ಳ ಏಕಾಏಕಿ ತುಂಬಿ ಹರಿದಿದೆ. ಈ ಹಳ್ಳ ಕಳಸ ಬಾಳೆಹೊನ್ನೂರು ಸಂಪರ್ಕದ ಹೆದ್ದಾರಿ ಮಧ್ಯೆ ಇರುವ ಮೋರಿ ಮೂಲಕ ಭದ್ರ ನದಿ ಸೇರುತ್ತದೆ. ಈ ಮೋರಿಯಲ್ಲಿ ಹೂಳು ತುಂಬಿದ ಪರಿಣಾಮ ಸೋಮವಾರ ಸಂಜೆ ಏಕಾಏಕಿ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರು ಮೋರಿ ಮೂಲಕ ಹರಿಯದೇ ರಸ್ತೆ ಮೇಲೆಯೇ ಉಕ್ಕಿ ಹರಿದಿದೆ.
ಈ ವೇಳೆ ರಸ್ತೆ ಮೇಲಿದ್ದ ಎರಡು ಹಸುಗಳು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೊಗಿದೆ. ರಸ್ತೆ ಮೇಲೆ ಬರುತ್ತಿದ್ದ ಕಾರೊಂದು ನೀರಿನಲ್ಲಿ ಸಿಲುಕಿದ್ದು, ಸ್ಥಳೀಯರು ಕಾರನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ದಿಡೀರ್ ನೀರು ಹರಿದು ಬಂದ ಪರಿಣಾಮ ಕಳಸ ಬಾಳೆಹೊನ್ನೂರು ರಸ್ತೆ ಮೇಲೆ ಸುಮಾರು 4 ಅಡಿಯಷ್ಟು ನೀರು ನಿಂತು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಮಹಲಗೋಡು ಗ್ರಾಮದಲ್ಲಿ ಎರಡು ಬದಿಯಲ್ಲಿ ಸುಮಾರು 5 ಕಿಮೀ ಉದ್ದಕ್ಕೂ ವಾಹನಗಳ ಸರತಿ ಸಾಲು ಕಂಡು ಬಂತು. ಸರಕಾರಿ, ಖಾಸಗಿ ಸಾರಿಗೆ ಬಸ್ ಗಳು, ಪ್ರವಾಸಿಗರ ವಾಹನಗಳು ರಸ್ತೆಯಲ್ಲೆ ನಿಂತು ಸಂಚಾರ ಸ್ಥಬ್ಧಗೊಂಡಿತ್ತು. ರಸ್ತೆಯಲ್ಲಿದ್ದ ಎರಡು ಬೈಕ್ ಗಳು ನೀರಿನಲ್ಲಿ ಅರ್ದ ಮುಳುಗಿದ್ದ ದೃಶ್ಯ ಕಂಡು ಬಂತು, ಸುಮಾರು 3 ಗಂಟೆ ಬಳಿಕ ಮಳೆ ಕಡಿಮೆಯಾಗಿದ್ದರಿಂದ ಸ್ಥಳೀಯರು ಮೋರಿಯಲ್ಲಿ ಸಿಲುಕಿಕೊಂಡಿದ್ದ ತ್ಯಾಜ್ಯ, ಕಸ ತೆರವು ಕಾರ್ಯಚರಣೆ ಮಾಡಿದ್ದರಿಂದ ಹೆದ್ದಾರಿಯಲ್ಲಿ ನಿಂತಿದ್ದ ನೀರು ಕಡಿಮೆಯಾಗಿ ವಾಹನ ಸಂಚಾರ ಪುನಾರಂಭಗೊಂಡಿದೆ