ಕಡೂರು | ಮಹಿಳೆಯಿಂದ ಚಿನ್ನಾಭರಣ ದೋಚಿ ಕೊಲೆ ಯತ್ನ; ಇಬ್ಬರ ಬಂಧನ
ಕಡೂರು: ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ಸುಲಿಗೆ ಮಾಡಿದ್ದಲ್ಲದೇ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭದ್ರಾವತಿ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದ ಶಹಬಾಝ್ ಅಹಮದ್ ಬಿನ್ ತಾಜುದ್ದಿನ್ ಮತ್ತು ಇದೇ ತಾಲೂಕಿನ ಸಿದ್ದಾಪುರ ತಾಂಡ್ಯದ ಹನುಮಾನಾಯ್ಕ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರಸ್ವತಿಪುರ ಗೇಟ್ ಬಳಿ ಅ.26ರ ಸಂಜೆ ಒಂಟಿಯಾಗಿ ನಿಂತಿದ್ದ ಮಹಿಳೆಯೊಬ್ಬರನ್ನು ಬೆದರಿಸಿದ ಆರೋಪಿಗಳು ಚಿನ್ನಾಭರಣ ಕಸಿದುಕೊಂಡು ಕೊಲೆಗೆ ಯತ್ನಿಸಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಆಧರಿಸಿ ಕೇವಲ ಎಂಟು ದಿನದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಡೂರು ವೃತ್ತ ನಿರೀಕ್ಷಕ ಎಂ.ರಫೀಕ್ ಮತ್ತು ಪಿಎಸ್ಸೈ ಪವನ್ ಕುಮಾರ್ ಮತ್ತು ಸಿಬ್ಬಂದಿ ತಂಡ ಲಭ್ಯ ಮಾಹಿತಿ ಮೇರೆಗೆ ಭದ್ರಾವತಿ ಮೂಲದ ಇಬ್ಬರು ಆಪಾದಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದರೋಡೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ಆರೋಪಿಗಳಿಂದ 85 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 40 ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿದ ಪೊಲೀಸರ ಕಾರ್ಯ ವೈಖರಿಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದ ಕಡೂರು ಪೊಲೀಸರ ಶ್ರಮವನ್ನು ಪ್ರಶಂಸಿಸಿ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ. ಸಿಬ್ಬಂದಿಯಾದ ಅಜರುದ್ದೀನ್, ಧನಂಜಯ, ಲೀಲಾವತಿ, ಮುಹಮ್ಮದ್ ರಜಾಕ್, ಧನಪಾಲ ನಾಯ್ಕ, ಕುಚೇಲ, ರೇಣುಕಾ ಪ್ರಸಾದ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.