ಕಳಸ | ಮಿಲ್ಲು ಗುಡ್ಡ ಅರಣ್ಯದಲ್ಲಿ ಕಾಡ್ಗಿಚ್ಚು; ಕಿಡಿಗೇಡಿಗಳ ಕೃತ್ಯಕ್ಕೆ 1 ಎಕರೆ ಪ್ರದೇಶ ಬೆಂಕಿಗಾಹುತಿ

ಚಿಕ್ಕಮಗಳೂರು: ಸೋಮವಾರ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊಟ್ಟಿಗೆಹಾರ-ಕಳಸ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಮಿಲ್ಲುಗುಡ್ಡದ ಸುಮಾರು 1 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಕಳಸ ತಾಲೂಕು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವುದಲ್ಲದೆ ಧಾರ್ಮಿಕ ಯಾತ್ರಾ ಸ್ಥಳವೂ ಆಗಿದೆ. ಈ ಕಾರಣಕ್ಕೆ ಇಲ್ಲಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು, ಯಾತ್ರಿಗಳು ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಿಗರೇಟು ಸೇದುವುದು, ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಸಿಗರೇಟು ಸೇದುವ ಕಿಡಿಗೇಡಿಗಳ ಕೃತ್ಯದಿಂದಾಗಿ ಮರಸಣಿಗೆ ಗ್ರಾಮ ಹಾಗೂ ಹಿರೇಬೈಲು ಗ್ರಾಮಗಳ ನಡುವೆ ಇರುವ ಮಿಲ್ಲುಗುಡ್ಡ ಎಂಬಲ್ಲಿನ ಅರಣ್ಯಕ್ಕೆ ಬೆಂಕಿ ಹರಡಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಬೆಂಕಿಯ ಕೆನ್ನಾಲಿಗೆ ಸುಮಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ ಎನ್ನಲಾಗಿದೆ.
ಮಿಲ್ಲುಗುಡ್ಡ ಅರಣ್ಯ ಭಾಗದಲ್ಲಿ ಅರಣ್ಯ ಇಲಾಖೆಯೇ ಬೆಳೆಸಿದ ಸಾವಿರಾರು ಅಪರೂಪದ ಗಿಡಮರಗಳಿದ್ದು, ಕಿಡಿಗೇಡಿಗಳ ಕೃತ್ಯದಿಂದಾಗಿ ಅರಣ್ಯ ಇಲಾಖೆ ಬೆಳೆಸಿದ ಮರ ಗಿಡಗಳು ಮತ್ತು ನೂರಾರು ಬಗೆಯ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ.
ಅರಣ್ಯಕ್ಕೆ ಬೆಂಕಿ ವ್ಯಾಪಿಸಿದ ಸುದ್ದಿ ತಿಳಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಕಾಲದಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಅರಣ್ಯ ಬೆಂಕಿಗೆ ಆಹುತಿಯಾಗುವುದು ತಪ್ಪಿದೆ. ಸದ್ಯ ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಘಟನೆ ಬಳಿಕ ಕಳಸ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ ಎನ್ನಲಾಗಿದೆ.