ಚಿಕ್ಕಮಗಳೂರು | ಒಂದೇ ದಿನ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಪತ್ತೆ; ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ದಿನ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ಒಟ್ಟು ನಾಲ್ಕು ಮಂದಿಯಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 20 ಪ್ರಕರಣ ಪತ್ತೆಯಾಗಿವೆ. 11 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 9 ಸಕ್ರಿಯ ಪ್ರಕರಣಗಳಿವೆ. ಒಟ್ಟು 494 ಜನರ ರಕ್ತವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 286 ಉಣ್ಣೆಗಳನ್ನು ಸಂಗ್ರಹಿಸಲಾಗಿದೆ. 3 ಮಂಗಗಳು ಸಾವನ್ನಪ್ಪಿವೆ.
ಬೇಸಿಗೆಯಲ್ಲಿ ಮಂಗನ ಕಾಯಿಲೆ ಅಧಿಕಗೊಳ್ಳುವ ಸಾಧ್ಯತೆಗಳಿದ್ದು, ಕಾಡಿಗೆ ಹೋಗುವ ಜನರು ಎಚ್ಚರ ವಹಿಸಬೇಕಾಗಿದೆ. ಕಾಡಿಗೆ ಹೋಗುವುದು ಅನಿವಾರ್ಯವಾದರೆ ಮೈ ತುಂಬ ಬಟ್ಟೆ ಧರಿಸಬೇಕಾಗಿದೆ. ಕೈ,ಕಾಲುಗಳಿಗೆ ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿ ಕೊಳ್ಳಬೇಕು. ಮನೆಗೆ ಮರಳಿದ ಬಳಿಕ ಬಟ್ಟೆಯನ್ನು ಬಿಚ್ಚಿ ಬಿಸಿನೀರಿನಲ್ಲಿ ಅದ್ದಿ ತೊಳೆಯಬೇಕು. ಸ್ನಾನ ಮಾಡಿ ಬೇರೆ ಬಟ್ಟೆ ಧರಿಸಿ ಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.