ಜೀವನೋಪಾಯಕ್ಕಾಗಿ ಮಾಡಿರುವ ಅರಣ್ಯಭೂಮಿ ಒತ್ತುವರಿ ತೆರವು ಮಾಡಬಾರದು : ಕೆ.ಎಲ್.ಅಶೋಕ್
ಆ.21ಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಚಿಕ್ಕಮಗಳೂರು : ಬಡವರು ನಿವೇಶನ ಹಾಗೂ ಜೀವನೋಪಾಯಕ್ಕಾಗಿ ಮಾಡಿರುವ ಅರಣ್ಯ, ಕಂದಾಯ ಭೂಮಿ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು. ಆದರೆ ಬಲಾಢ್ಯರು, ಬಂಡವಾಳಶಾಹಿಗಳು, ಶ್ರೀಮಂತರು, ರಾಜಕಾರಣಿಗಳು ಮಾಡಿರುವ ಎಲ್ಲ ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು ಎಂದು ಆಗ್ರಹಿಸಿ ಆ.21ರಂದು ನಗರದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಸಮಿತಿ ಸಂಚಾಲಕ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಯನಾಡ್ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವು ಮಾಡಲು ಆದೇಶಿಸಿದೆ. ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲೆಂದರಲ್ಲಿ ಅರಣ್ಯ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಒತ್ತುವರಿ ತೆರವಿಗೂ ಮುನ್ನ ನೋಟಿಸ್ ಜಾರಿ ಮಾಡಬೇಕೆಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಒತ್ತುವರಿ ತೆರವು ಆದೇಶದಿಂದಾಗಿ ಮಲೆನಾಡು ಭಾಗದಲ್ಲಿ ನಿವೇಶನ ಹಾಗೂ ಜೀವನೋಪಾಯಕ್ಕಾಗಿ ಬಡವರು, ಸಣ್ಣ ರೈತರು ಮಾಡಿರುವ 1-4 ಎಕರೆ ಅರಣ್ಯ ಭೂಮಿ ಒತ್ತುವರಿದಾರರಲ್ಲಿ ಆತಂಕ ಎದುರಾಗಿದ್ದು, ಬಡ ಸಾಗುವಳಿದಾರರು ಬೀದಿಪಾಲಾಗುವ ಆತಂಕ ಎದುರಾಗಿದೆ ಎಂದರು.
ಶ್ರೀಮಂತರು, ಬಂಡವಾಳಶಾಹಿಗಳು, ರಾಜಕಾರಣಿಗಳು, ಬಲಾಢ್ಯರು ದುರಾಸೆಗೆ ಬಿದ್ದು ಮಾಡಿರುವ ಒತ್ತುವರಿ ತೆರವಿಗೆ ನಮ್ಮ ವಿರೋಧವಿಲ್ಲ. ಇಂತಹ ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು. ಆದರೆ ಜೀವನೋಪಾಯಕ್ಕೆ ಮಾಡಿರುವ ಎಲ್ಲ ವರ್ಗದವರ ಒತ್ತುವರಿಯನ್ನು ತೆರವು ಮಾಡಬಾರದು, ಬದಲಿಗೆ ಅಂತಹ ಸಾಗುವಳಿಗೆ ಮಂಜೂರಾತಿ ನೀಡಬೇಕು. ಅಲ್ಲದೇ ಅರಣ್ಯ, ಕಂದಾಯ ಜಾಗದಲ್ಲಿ ಕೃಷಿ ಮಾಡಿ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.21ರಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಸಮಿತಿ ಸಂಚಾಲಕ ಗೌಸ್ ಮೊಹಿದ್ದೀನ್ ಮಾತನಾಡಿ, ಅರಣ್ಯ ಸಚಿವರು ಇತ್ತೀಚೆಗೆ ಅರಣ್ಯ ಒತ್ತುವರಿ ತೆರವಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಣ್ಣ ರೈತರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೇ ತೆರವು ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ನಡೆದಲ್ಲಿ ಸಂತ್ರಸ್ತರು ನಮ್ಮ ಸಂಘಟನೆಯನ್ನು ಸಂಪರ್ಕಿಸಿದಲ್ಲಿ ಸಂಘಟನೆ ವತಿಯಿಂದ ತೆರವಿನ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ, ಜೀವನೋಪಾಯಕ್ಕಾಗಿ ಮಾಡಿರುವ ಒತ್ತುವರಿಯನ್ನು ತೆರವು ಮಾಡಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಟಿ.ಎಲ್.ಗಣೇಶ್, ಮುನ್ನಾ, ಶೋಯಬ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
"ಜಿಲ್ಲೆಯಲ್ಲಿ ಬಲಾಢ್ಯರು, ಪ್ರಭಾವಿಗಳು, ರಾಜಕಾರಣಿಗಳು ಮಾಡಿರುವ ಒತ್ತುವರಿಯನ್ನು ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಹಿಂದೆಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿದ್ದಾರೆಂಬ ಆರೋಪ ಇದೆ. ಅವರು ಖುದ್ದು ಅರಣ್ಯ ಭೂಮಿಯನ್ನು ಇಲಾಖೆ ವಶಕ್ಕೆ ನೀಡುವ ಮೂಲಕ ಮಾದರಿಯಾಗಬೇಕು. ಬಡವರು ಜೀವನೋಪಾಯಕ್ಕೆ ಮಾಡಿರುವ ಒತ್ತುವರಿ ತೆರವು ಮಾಡಿ ರಾಜಕಾರಣಿಗಳ ಒತ್ತುವರಿ ಭೂಮಿಯನ್ನು ತೆರವು ಮಾಡದ ಅರಣ್ಯ ಇಲಾಖೆ ಕ್ರಮ ಖಂಡನೀಯ"
- ಕೆ.ಎಲ್.ಅಶೋಕ್
"ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಕಾಫಿ ಎಸ್ಟೇಟ್ ಹೊಂದಿದ್ದಾರೆ. ಸುಮಾರು 800 ಎಕರೆಯಷ್ಟು ಕಾಫಿ ತೋಟ ಹೊಂದಿರುವ ಅವರು 200 ಎಕರೆ ಅರಣ್ಯವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪವಿದೆ. ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಆರಂಭವಾಗಬೇಕು. ಬಡವರು ಜೀವನೋಪಾಯಕ್ಕೆ ಮಾಡಿರುವ ಒತ್ತುವರಿಯನ್ನು ತೆರವು ಮಾಡಲು ಸಿದ್ಧತೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಉಸ್ತುವಾರಿ ಸಚಿವರ ಅರಣ್ಯ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮ ಏನೆಂದು ಸ್ಪಷ್ಟಪಡಿಸಬೇಕು. ಉಸ್ತುವಾರಿ ಸಚಿವರೂ ಸೇರಿದಂತೆ ಜಿಲ್ಲೆಯಲ್ಲಿ ಪ್ರಭಾವಿಗಳು, ರಾಜಕಾರಣಿಗಳು, ಬಲಾಢ್ಯರು, ಕಂಪೆನಿಗಳು ಮಾಡಿರುವ ಕಂದಾಯ, ಅರಣ್ಯ ಒತ್ತುವರಿ ತೆರವು ಮಾಡಿ ಭೂರಹಿತರಿಗೆ ಹಂಚಿಕೆ ಮಾಡಬೇಕು"
-ಗೌಸ್ ಮೊಹಿದ್ದೀನ್