ಶಶಿ ತರೂರ್ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎಡರಂಗ ತಪ್ಪು ಮಾಡಿದೆ: ಪ್ರಕಾಶ್ ರಾಜ್
ಪ್ರಕಾಶ್ ರಾಜ್
ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಸಿಪಿಐಎಂ ನೇತೃತ್ವದ ಎಡರಂಗವು ತಪ್ಪು ಮಾಡಿದೆ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ರಾಜಕಾರಣಿಗಳು ಕಿವಿಗೊಟ್ಟು ಆಲಿಸುವ ಶಶಿ ತರೂರ್ ಉತ್ತಮ ಮಲಯಾಳಿ ವಾಗ್ಮಿ ಹಾಗೂ ಮುತ್ಸದ್ದಿಯಾಗಿದ್ದಾರೆ. ಎರಡು ಜಾತ್ಯತೀತ ಪಕ್ಷಗಳು ಸ್ಪರ್ಧೆಗೆ ಬಿದ್ದು, ಅವರ ಮತಗಳು ಚದುರಿ ಹೋಗುವ ಮೂಲಕ ತನಗೆ ಲಾಭವಾಗಲಿ ಎಂಬ ಬಿಜೆಪಿಯ ಹುನ್ನಾರಕ್ಕೆ ಎಡ ರಂಗವು ಬಲಿಯಾಗಬಾರದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಎಡರಂಗದ ಅಭ್ಯರ್ಥಿ ಪನ್ನಯ್ಯನ್ ರವೀಂದ್ರನ್ ಅವರನ್ನು ಬಲ್ಲೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದು, ಉತ್ತಮ ರಾಜಕಾರಣಿಯಾಗಿದ್ದಾರೆ. ಆದರೆ, ತರೂರ್ ವಿರುದ್ಧ ತನ್ನ ಅಭ್ಯೆರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎಡರಂಗ ತಪ್ಪು ಮಾಡಿದೆ ಎಂದು ನನಗನ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಬದಲು ದೇಶದ ಕಲ್ಯಾಣವನ್ನು ಚಿಂತಿಸುವುದು ಮುಖ್ಯವಾಗಿದೆ ಎಂದು ಹೇಳಿದ ಪ್ರಕಾಶ್ ರಾಜ್, ಕಳೆದ 15 ವರ್ಷಗಳಿಂದ ತರೂರ್ ಮಾಡಿರುವ ಕೆಲಸಗಳನ್ನು ನಿರ್ಲಕ್ಷಿಸಬಾರದು. ತಿರುವನಂತಪುರಂ ಮತದಾರರು ಅವರನ್ನು ಕೈಬಿಡಬಾರದು ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ಅವರು ತಿರುವನಂತಪುರಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ರಾಜೀವ್ ಚಂದ್ರಶೇಖರ್, ತಮ್ಮ ದೊರೆ (ನರೇಂದ್ರ ಮೋದಿ) ವಿರುದ್ಧ ಏನನ್ನೂ ಮಾತನಾಡಲಾರರು. ಅವರು ತಮ್ಮ ರಾಜ್ಯದ ಬಡ ರೈತರಿಗಾಗಿ ತಲಾ ರೂ. 500 ಬರ ಪರಿಹಾರಕ್ಕೂ ಒತ್ತಾಯಿಸಲಾರರು ಎಂದು ವಾಗ್ದಾಳಿ ನಡೆಸಿದ್ದಾರೆ.