ಬರಗಾಲ ನಿರ್ವಹಣೆಗೆ ಸಮಗ್ರ ಮುಂಜಾಗ್ರತೆ ಕ್ರಮವಹಿಸಬೇಕು ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ
ಚಿಕ್ಕಮಗಳೂರು: ಬರಗಾಲ ಪೀಡಿತ ಪ್ರದೇಶಗಳಲ್ಲಿ ಪ್ರಸಕ್ತ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೊಪ್ಪ ತಾಲೂಕಿನ ಪುರಭವನದಲ್ಲಿ ಮಂಗಳವಾರ ಶೃಂಗೇರಿ ಹಾಗೂ ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅಧಿಕಾರಿಗಳು ತುರ್ತಾಗಿ ಅನುಷ್ಠಾನಗೊಳಿಸಬೇಕು. ಪ್ರತೀ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವು 21ರಿಂದ 23 ವಾರಗಳಿಗೆ ಸಾಕಾಗುವಷ್ಟಿದ್ದು, ಮುಂದೆ ಮೇವಿಗೆ ಕೊರತೆಯಾಗದಂತೆ ರೈತರಿಗೆ ಮೇವು ಉತ್ಪಾದನೆಗಾಗಿ ಮೇವಿನ ಬೀಜಗಳ ಕಿಟ್‍ಗಳನ್ನು ವಿತರಿಸಿ ಜಿಲ್ಲೆಗೆ ಸಾಕಾಗುವಷ್ಟು ಮೇವನ್ನು ಬೆಳೆಯಬೇಕು ಎಂದರು.
ಮಲೆನಾಡು ಪ್ರದೇಶದಲ್ಲಿ ಮೇವು ಬೆಳೆಯಲು ಉತ್ತಮ ವಾತಾವರಣವಿದ್ದು, ಪಕ್ಕದ ಜಿಲ್ಲೆಯಿಂದ ಮೇವು ಪೂರೈಕೆಗೆ ಬೇಡಿಕೆ ಬಂದ ಸಂದರ್ಭದಲ್ಲಿ ಮೇವಿನ ಲಭ್ಯತೆಗನುಗುಣವಾಗಿ ಮೇವು ಬೆಳೆದು ಒದಗಿಸಬೇಕೆಂದು ಸೂಚಿಸಿದ ಅವರು, ಸದ್ಯ ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.