ಅನುಕಂಪದ ನೌಕರಿಗೆ ಶಿಫಾರಸು ಮಾಡಲು ಲಂಚ ಸ್ವೀಕಾರ: ಮೂಡಿಗೆರೆ ಬಿಇಒ ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು, ಡಿ.27: ಅನುಕಂಪದ ಆಧಾರದ ನೌಕರಿಗೆ ಶಿಫಾರಸು ಮಾಡಲು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಮೂಡಿಗೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಹೇಮಂತರಾಜ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದಲ್ಲಿ ಸಹ ಶಿಕ್ಷಕರಾಗಿದ್ದ ಚಿಕ್ಕಮಗಳೂರಿನ ತೇಗೂರು ಗ್ರಾಮದ ರಜನಿಕಾಂತ್ ಏಳು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪತ್ನಿ ಲತಾಮಣಿ ಅನುಕಂಪದ ನೌಕರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ಮೇಲಾಧಿಕಾರಿಗೆ ಶಿಫಾರಸು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಯವರಲ್ಲಿ ಲತಾಮಣಿ ಮನವಿ ಮಾಡಿದ್ದರು. ಇದಕ್ಕೆ ಬಿಇಒ ಹೇಮಂತರಾಜ್ 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಕೊನೆಗೆ 10 ಸಾವಿರ ರೂ.ಗೆ ಒಪ್ಪಿದ್ದರು ಎಂದು ಲತಾಮಣಿ ಲೋಕಾಯುಕ್ತ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಲತಾಮಣಿಯಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಬಿಇಒ ಹೇಮಂತರಾಜ್ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.