ಮೂಡಿಗೆರೆ | ಹುಲಿ ಹತ್ಯೆ ಆರೋಪ : ಇಬ್ಬರ ಬಂಧನ
ಮೂಡಿಗೆರೆ : ತಾಲೂಕಿನ ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ತಾಲೂಕಿನ ತಳವಾರ ಗ್ರಾಮದ ದೀಕ್ಷಿತ್ (31) ಮತ್ತು ಕಳಸ ತಾಲೂಕಿನ ಮರಸಣಿಗೆ ಗ್ರಾಮದ ಆದಿತ್ಯ (19) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿದ್ದು, ಉಳಿದವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದು, ಪ್ರಕರಣದ ಮುಖ್ಯ ಆರೋಪಿ ಅರಣ್ಯ ಇಲಾಖೆ ವಾಚರ್ ಆಗಿರುವ ಕುಂಡ್ರ ಗ್ರಾಮದ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹುಲಿಯೊಂದನ್ನು ಹತ್ಯೆ ಮಾಡಿ ಅದರ ಅಂಗಾಂಗಗಳನ್ನು ತೆಗೆದು ಬಳಿಕ ಅದರ ಕಳೇಬರವನ್ನು ಹೂತಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಬಂಧಿತ ಆರೋಪಿಗಳ ಜೊತೆ ಸ್ಥಳ ಮಹಜರು ನಡೆಸಿದ್ದು, ಪತ್ತೆಯಾದ ಪ್ರಾಣಿಯ ಪಳೆಯುಳಿಕೆಗಳನ್ನು ಸಂಗ್ರಹಿಸಿದ್ದಾರೆ. ಪತ್ತೆಯಾಗಿರುವ ಪಳೆಯುಳಿಕೆಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.