ಮೂಡಿಗೆರೆ | ಟ್ರಾಕ್ಟರ್ - ಕಾರು ಮಧ್ಯೆ ಅಪಘಾತ: ಕಾರು ಚಾಲಕನಿಗೆ ಗಂಭೀರ ಗಾಯ
ಮೂಡಿಗೆರೆ, ಡಿ.21: ಟ್ರಾಕ್ಟರ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ಸಮೀಪದ ಮುತ್ತಿಗೆಪುರ ಎಂಬಲ್ಲಿ ನಡೆದಿದೆ.
ಗಾಯಾಳು ಕಾರು ಚಾಲಕನನ್ನು ಬೇಲೂರು ತಾಲೂಕು ಚೀಕನಹಳ್ಳಿ ಮೂಲದ ಯುವಕ ಕೀರ್ತಿ ಎಂದು ಗುರುತಿಸಲಾಗಿದೆ.
ಮುತ್ತಿಗೆಪುರ ಪ್ರೌಢಶಾಲೆ ಬಳಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕೀರ್ತಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಲ್ಲಿ ಸಂಚರಿಸುತ್ತಿದ್ದ ಟ್ರಾಕ್ಟರ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದ ಕೀರ್ತಿಯನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.
ಗಂಭೀರವಾಗಿ ಗಾಯಗೊಂಡಿರುವ ಕೀರ್ತಿಯನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story