ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಬೆಳೆದು ಬಂದ ಹಾದಿ
ಚಿಕ್ಕಮಗಳೂರಿನಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್
ಚಿಕ್ಕಮಗಳೂರು : ಮಲೆನಾಡಿಗರು ಎಂದಾಕ್ಷಣ ನಮ್ಮೆದುರು ಬಂದು ನಿಲ್ಲುವುದು ಸೌಮ್ಯಸ್ವಭಾವದ ಜನ, ಇಲ್ಲಿನ ಕಾನನ, ಅದರೊಳಗೊಂದು ಬದುಕಿನ ಜಂಜಾಟ, ಹೋರಾಟದ ಕಿಚ್ಚು, ಆ ಕಿಚ್ಚಿನ ಹೋರಾಟಗಳಲ್ಲಿ ರಕ್ತಚರಿತ್ರೆ ಬರೆದಂತಹ ಹೋರಾಟವೇ ನಕ್ಸಲ್ ಚಳುವಳಿ. ಇಂದಿಗೂ ಮಲೆನಾಡಿಗರ ಮನದಲ್ಲಿ ಈ ಚಳುವಳಿಯ ನೆನಪುಗಳು ಅಚ್ಚಳಿಯದಂತೆ ಉಳಿದು ಬಿಟ್ಟಿದೆ.
ನಕ್ಸಲ್ ಹೋರಾಟದ ಆರಂಭ:
ಕುದುರೆಮುಖ ಸುತ್ತಮುತ್ತಲ ಗಿರಿಜನರು ಇಲ್ಲಿನ ಸ್ವಚ್ಚಂದ ಪರಿಸರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಇಂತಹ ಹೊತ್ತಿನಲ್ಲಿ ಸರಕಾರ 1987ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡಿತು. ಕಾಡಂಚಿನ ಜನರಿಗೆ ತಮ್ಮ ಬದುಕಿನ ಅಭದ್ರತೆ ಕಾಡಲಾರಂಭಿಸಿತು. ಗಿರಿಜನರನ್ನು ಒಕ್ಕಲೆಬ್ಬಿಸುತ್ತಾರೆಂಬ ಆತಂಕವೂ ಎದುರಾಯಿತು.
ಕುದುರೆಮುಖ ರಾಷ್ಟ್ರೀಯ ಉದ್ಯನವನ ಹೆಸರಿನಲ್ಲಿ ಇಲ್ಲಿನ ಗಿರಿಜನರನ್ನು ಒಕ್ಕಲೆಬ್ಬಿಸಬಾರದು, ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಮಲೆನಾಡಿನ ಭಾಗದಲ್ಲಿ ಹೋರಾಟಗಳು ನಿಧಾನವಾಗಿ ಆರಂಭಗೊಂಡವು. 90ರ ದಶಕದಲ್ಲಿ ಹೋರಾಟಗಾರ್ತಿ ಮೇದಾಪಾಟ್ಕರ್ ಅವರ ನೇತೃತ್ವದಲ್ಲಿ ಶೃಂಗೇರಿಯಲ್ಲಿ ಪ್ರತಿಭಟನೆಗಳು ಆರಂಭಗೊಂಡು ಅಲ್ಲಿಂದ ನಿಧಾನವಾಗಿ ಹೋರಾಟ ವಿಸ್ತಾರಗೊಂಡಿತು.
ಒಂದು ಕಡೆ ಹೋರಾಟ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದರೆ, ಮತ್ತೊಂದು ಕಡೆ ನಕ್ಸಲ್ ಚಳುವಳಿ ನಿಧಾನವಾಗಿ ತಲೆ ಎತ್ತಲಾರಂಭಿಸಿತು. ಜನರನ್ನು ಒಕ್ಕಲೆಬ್ಬಿಸಬಾರದು, ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಬೇಕೆಂಬ ಬೇಡಿಕೆಯೊಂದಿಗೆ 1999-2000 ಇಸವಿಯಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್, ಬಿ.ಜಿ.ಕೃಷ್ಣಮೂರ್ತಿ, ಮುಂಡಗಾರು ಲತಾ, ಹೊಸಗದ್ದೆ ಪ್ರಭಾ ಸೇರಿದಂತೆ ಕೆಲವರ ತಂಡ ಮಲೆನಾಡಿನ ಕಾಡಂಚಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದರು. ಹೀಗೆ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಆರಂಭಗೊಂಡಿತು.
ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಬೆಳೆದು ಬಂದ ಹಾದಿ:
ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ 2000-10ರ ಅವಧಿಯಲ್ಲಿ ತೀವ್ರತೆಯನ್ನು ಪಡೆದುಕೊಂಡಿತು. 2002 ನವೆಂಬರ್ ತಿಂಗಳಲ್ಲಿ ಕೊಪ್ಪ ತಾಲ್ಲೂಕು ಮೆಣಸಿನಹಾಡ್ಯದಲ್ಲಿ ನಕ್ಸಲ್ ಬಂದೂಕು ತರಬೇತಿ ಸಂದರ್ಭದಲ್ಲಿ ಹಾರಿದ ಗುಂಡು ಗ್ರಾಮದ ಚೀರಮ್ಮ ಎಂಬ ಮಹಿಳೆ ಕಾಲಿಗೆ ತಗುಲಿತ್ತು. ಇದರಿಂದ ಮಲೆನಾಡು ಭಾಗದಲ್ಲಿ ಶಸಸ್ತ್ರ ಚಟುವಟಿಕೆಯೊಂದು ನಡೆಯುತ್ತಿದೆ ಎಂಬ ಗುಮಾನಿ ಎದ್ದಿತು.
ಬಂದೂಕಿನ ಮೂಲಕ ನ್ಯಾಯ ಪಡೆಯಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ 'ನಕ್ಸಲ್ ಚಳುವಳಿ' ನಿಧಾನವಾಗಿ ಮಲೆನಾಡಿನಲ್ಲಿ ತೀವ್ರತೆ ಪಡೆದುಕೊಳ್ಳುತ್ತಾ ಹೋಯಿತು. ನೆತ್ತರು ಹರಿಯಲಾರಂಭಿಸಿತು. ಇದಕ್ಕೆ ಸಾಕ್ಷಿ ಎಂಬಂತೆ 2003ರ ಆಗಸ್ಟ್ 6ರಂದು ಕುದುರೆಮುಖ ಸಮೀಪದ ಸಿಂಗ್ಸಾರ್ ಗ್ರಾಮದ ರಾಮಚಂದ್ರಗೌಡ್ಲು ಮನೆ ಸಮೀಪ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಇದೇ ವರ್ಷದ ಡಿಸೆಂಬರ್ 29ರಂದು ಶೃಂಗೇರಿ ತಾಲ್ಲೂಕು ನೆಮ್ಮಾರ್ ಅರಣ್ಯ ಪ್ರವಾಸಿ ಮಂದಿರಕ್ಕೆ ನಕ್ಸಲರು ಬೆಂಕಿ ಹಚ್ಚಿದರು. ಇಂತಹ ಘಟನೆಗಳು ಪದೇ ಪದೇ ನಡೆಯಲಾರಂಭಿಸಿದವು.
ನಕ್ಸಲ್ ಚಳುವಳಿ ತೀವ್ರಗೊಂಡ ಕಾಲಘಟ್ಟ:
ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಬೇರೂರಿ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. 2004ರ ಹೊತ್ತಿಗೆ ಚಳುವಳಿ ಇನ್ನಷ್ಟು ತೀವ್ರತೆಯನ್ನು ಪಡೆದುಕೊಂಡು ಬಿಟ್ಟಿತ್ತು. 2004ರ ಆಗಸ್ಟ್ 27ರಂದು ಶೃಂಗೇರಿ ತಾಲ್ಲೂಕು ಬುಕಡಿಬೈಲು ಸಮೀಪ ತಲಗಾರು ರಾಮೇಗೌಡ್ಲು ಮನೆ ಸಮೀಪ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. 2004 ಅಕ್ಟೋಬರ್ 7ರಂದು ಶೃಂಗೇರಿ ತಾಲ್ಲೂಕು ಕಿಗ್ಗಾ ಸಮೀಪ ಮಘೇಭೈಲು ಚಂದ್ರಶೇಖರ್ ಮನೆ ಕಾವಲಿಗಿದ್ದ ಮುಖ್ಯಪೇದೆ ಮುದ್ದಪ್ಪ ಅವರನ್ನು 13 ಜನರಿದ್ದ ನಕ್ಸಲರ ತಂಡ ಅಪಹರಿಸಿತು. ಪೇದೆಯಿಂದ ಎಸ್ಎಲ್ಆರ್ ಬಂದೂಕು ಕಸಿದುಕೊಂಡು ಪೇದೆಯನ್ನು ನಕ್ಸಲರು ಬಿಡುಗಡೆ ಮಾಡಿದರು. 2004 ಅಕ್ಟೋಬರ್ 11ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬರ್ಕಣ ಜಲಪಾತ ಬಳಿ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ನಕ್ಸಲರೊಬ್ಬರು ಗಾಯಗೊಂಡರು. ಇದೇ ವರ್ಷದ ನವೆಂಬರ್ 21ರಂದು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಕಾರಣಕ್ಕೆ ತಲಗಾರು ಸಮೀಪದ ಹೆಮ್ಮಿಗೆ ಚಂದ್ರಕಾಂತ್ ಮೇಲೆ ನಕ್ಸಲರು ಮಾರಣಾಂತಿಕ ಹಲ್ಲೆ ನಡೆಸಿದರು. ಡಿಸೆಂಬರ್ 11ರಂದು ಶೃಂಗೇರಿ ತಾಲ್ಲೂಕು ಬುಕಡಿಬೈಲು ಉಮೇಶ ಅವರನ್ನು ನಕ್ಸಲರು ಕಾಡಿಗೆ ಕರೆದುಕೊಂಡು ಹೋಗಿ ಸೌರ್ಹಾದ ಮಾತುಕತೆ ನಡೆಸಿದರು.
ನಕ್ಸಲ್ ನಾಯಕ ಸಾಕೇತ್ ರಾಜನ್ ಯುಗಾಂತ್ಯ:
ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಆರಂಭಗೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಾರೆ. ತಮ್ಮ ನಾಯಕನನ್ನು ಕಳೆದುಕೊಂಡು ಇನ್ನಷ್ಟು ಕೇರಳಿದ ನಕ್ಸಲರು ತಮ್ಮ ಹೋರಾಟವನ್ನು ಮತ್ತಷ್ಟು ತ್ರೀವ್ರಗೊಳಿಸಿದರು. 2005 ಜಿಲ್ಲೆಯ ಮಟ್ಟಿಗೆ ಕರಾಳವರ್ಷವೆಂದೇ ಹೇಳಬಹುದಾಗಿದ್ದು, ಬಾರೀ ರಕ್ತಪಾತಕ್ಕೆ ಕಾರಣವಾಗುತ್ತದೆ.
2005ರ ಜನವರಿ 1 ಹೊಸವರ್ಷದ ದಿನವೇ ಶೃಂಗೇರಿ ತಾಲ್ಲೂಕು ಸಿರಿಮನೆ ಬಳಿಯ ದೇವರಹಕ್ಲು ಗ್ರಾಮದ ಸಿಂಗಪ್ಪಗೌಡ ಅವರ ಮನೆಗೆ 7 ಜನರ ನಕ್ಸಲ್ ತಂಡ ಬೇಟಿ ನೀಡಿದ್ದಾರೆ ಎಂಬ ಸುದ್ಧಿ ಕಾಡ್ಗಿಚ್ಚಿನಂತೆ ಎಲ್ಲಾ ಕಡೆಗಳಲ್ಲಿ ಹರಡುತ್ತದೆ. ಜನವರಿ 5ರಂದು ಪೇದೆ ಮುದ್ದಪ್ಪ ಅಪಹರಣ ಆರೋಪದಡಿಯಲ್ಲಿ ಬಳ್ಳಾರಿ ಉಜ್ಜನಿಗೌಡ ಅವರನ್ನು ಬಂಧಿಸಲಾಗುತ್ತದೆ. ಜನವರಿ 29ರಂದು ಶೃಂಗೇರಿ ತಾಲ್ಲೂಕು ಕಿಗ್ಗಾ ಸಮೀಪ ಅರಣ್ಯ ಇಲಾಖೆ ಶಿಕಾರಿ ನಿಗ್ರಹ ದಳ ಬಿಡಾರದ ಮೇಲೆ ನಕ್ಸಲರು ದಾಳಿ ನಡೆಸುತ್ತಾರೆ.
2005 ಫೆಬ್ರವರಿ 6ರಂದು ಕೊಪ್ಪ ತಾಲ್ಲೂಕು ಮೆಣಸಿನಹಾಡ್ಯ ಬಲಿಗೆ ಗುಡ್ಡದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಶಿವಲಿಂಗು ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಾರೆ. ಸಾಂಕೇತ್ ರಾಜನ್ರವರ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿ ತಮ್ಮ ನಾಯಕನ ಸಾವಿಗೆ ಕಾರಣರಾದವ ಎಂಬ ಕಾರಣಕ್ಕೆ ಮೇ.17ರಂದು ಗಿರಿಜನ ಮುಖಂಡ ಮೆಣಸಿನ ಹಾಡ್ಯ ಪಿ.ಶೇಷಯ್ಯ ಅವರನ್ನು ನಕ್ಸಲರು ಬರ್ಬರವಾಗಿ ಹತ್ಯೆಗೈಯುತ್ತಾರೆ. ಈ ಹತ್ಯೆಯ ಬಳಿಕ ಸರಕಾರ ನಕ್ಸಲ್ ನಿಗ್ರಹಕ್ಕೆ ನಕ್ಸಲ್ ನಿಗ್ರಹ ಪಡೆ ನೇಮಕಕ್ಕೆ ಮುಂದಾಯ್ತು ಹಾಗೂ ಕುದುರೆಮುಖ ಉದ್ಯಾನ ವ್ಯಾಪ್ತಿಯಲ್ಲಿ ಈ ಪಡೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿತು. 2005ರ ಸೆಪ್ಟಂಬರ್ 24ರಂದು ಮೂಡಿಗೆರೆ ತಾಲ್ಲೂಕು ಕಚೇರಿ ಗೋಡೆ ಮೇಲೆ ನಕ್ಸಲ್ ಭಿತ್ತಿಪತ್ರ ಅಂಟಿಸಿದ್ದರು. ಅಕ್ಟೋಬರ್ 1ರಂದು ಶೃಂಗೇರಿ ತಾಲ್ಲೂಕು ರೈತರೊಬ್ಬರ ಮನೆಗೆ ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ ನಕ್ಸಲ್ ತಂಡ ಭೇಟಿ ನೀಡಿ ಮಾತುಕತೆ ನಡೆಸಿತ್ತು. ನವೆಂಬರ್ 4 ರಂದು ಶೃಂಗೇರಿ ತಾಲ್ಲೂಕು ತನಿಕೋಡ್ ಅರಣ್ಯ ತನಿಖಾ ಠಾಣೆ ಕಟ್ಟಡ ಸ್ಫೋಟಗೊಳಿಸಿದರು. ನವೆಂಬರ್ 15ರಂದು ಶೃಂಗೇರಿ ಪಟ್ಟಣದಲ್ಲಿ ನಕ್ಸಲ್ ಯುವತಿಯನ್ನು ಬಾಳೆಹೊನ್ನೂರು ಸಮೀಪದ ದೂಬಳ ಗ್ರಾಮದಲ್ಲಿ ಬಂಧಿಸಲಾಗುತ್ತದೆ.
2006 ರಿಂದ 2010ರ ವರೆಗೂ ಮುಂದುವರೆದ ನಕ್ಸಲ್ ಹೋರಾಟ:
ನಕ್ಸಲ್ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತು. ತಮ್ಮ ಹೋರಾಟವನ್ನು ಮುಂದುವರೆಸಿದ ನಕ್ಸಲರು 2006 ಫೆಬ್ರವರಿ 6ರಂದು ಕೊಪ್ಪ ತಾಲ್ಲೂಕು ಮೆಣಸಿನಹಾಡ್ಯದ ಬಲಿಗೆಯಲ್ಲಿ ಸಾಕೇತ್ ರಾಜನ್ ಮತ್ತು ಶಿವಲಿಂಗು ಅವರ ಸ್ಮಾರಕ ನಿರ್ಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮೇ.30ರಂದು ಕೊಪ್ಪ ತಾಲ್ಲೂಕು ಹೆಗ್ಗಾರುಕೊಡಿಗೆ ನಾರಾಯಣಗೌಡ ಮನೆಗೆ ಶಸ್ತ್ರಸಜ್ಜಿತ 8 ನಕ್ಸಲರ ಬೇಟಿ ನೀಡಿ 1 ಏರ್ ಗನ್ ಹಾಗೂ ಬಂದೂಕು ಅಪಹರಣ ಮಾಡಿದರು. ಆಗಸ್ಟ್ 23ರಂದು ಶೃಂಗೇರಿ ತಾಲ್ಲೂಕು ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿ ಜೀಪ್ ಹಾಗೂ ಕಡತಗಳನ್ನು ನಾಶಗೊಳಿಸಿದರು. ಚಿಕ್ಕಮಗಳೂರು ತಾಲ್ಲೂಕು ಸಾರಗೋಡು-ಕುಂದೂರಿಗೆ ನಕ್ಸಲರು ಭೇಟಿ ನೀಡಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದರು. ಡಿಸೆಂಬರ್ 25ರಂದು ಶೃಂಗೇರಿ ತಾಲ್ಲೂಕು ಕಿಗ್ಗಾ ಸಮೀಪ ಕೆಸಮುಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವಕ ಬಲಿಯಾಗುತ್ತಾನೆ.
2007ರ ಜೂನ್ 3ರಂದು ಶೃಂಗೇರಿ ತಾಲ್ಲೂಕು ಕಿಗ್ಗಾ ಸಮೀಪ ಗಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲಕ ಕಾಂಗ್ರೆಸ್ ಮುಖಂಡ ವೆಂಕಟೇಶ್ ಹತ್ಯೆ ನಡೆಸಲಾಗುತ್ತದೆ. ಆ ಬಳಿಕ ಕುದರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಕ್ಸಲರು ಬಂದ್ಗೆ ಕರೆ ನೀಡಿದರು. ಆದರೆ, ಬಂದ್ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂದಿನ ಬಂದ್ಗೆ ಪೊಲೀಸರು ಮತ್ತು ಎಎನ್ಎಫ್ ಸಿಬ್ಬಂದಿ ಸರ್ಪಗಾವಲು ಹಾಕಿದ್ದರು. ನಕ್ಸಲರು ಕರೆ ನೀಡಿದ ಬಂದ್ಗೆ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಲಿಲ್ಲ, ಆಗಲೇ ನಕ್ಸಲರ ಅಟ್ಟಹಾಸಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಮಲೆನಾಡು ಶಾಂತಿ ವೇದಿಕೆ ಕರೆ ನೀಡಿದ್ದ ಮಲೆನಾಡು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೀಗೆ ನಂತರ ದಿನಗಳಲ್ಲಿ ನಕ್ಸಲ್ ಚಟುವಟಿಕೆ ಕ್ರಮೇಣವಾಗಿ ಕ್ಷೀಣಿಸುತ್ತಾ ಬರಲಾರಂಭಿಸಿದರು. 2010ರ ವರೆಗೂ ಅಲ್ಲಲ್ಲಿ ನಕ್ಸಲ್ ಕಾರ್ಯಚಟುವಟಿಕೆ ತೆರೆಮರೆಯಲ್ಲಿ ನಡೆಯುತ್ತಲೇ ಇತ್ತು. ಸರಕಾರ, ಪೊಲೀಸ್ ಮತ್ತು ನಕ್ಸಲರ ನಡುವಿನ ತಿಕ್ಕಾಟಗಳ ನಡುವೆ 2010ರ ಬಳಿಕ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಕ್ಷೀಣಿಸಲಾರಂಭಿಸಿತು.
ಸರಕಾರ ಮತ್ತು ನಕ್ಸಲರ ಹೋರಾಟದ ನಡುವೆ ಜನರ ಪಾಡು ಮತ್ತು ನಕ್ಸಲರಿಗೆ ಸಿಕ್ಕ ಜನ ಬೆಂಬಲ:
ನಕ್ಸಲ್ ನಾಯಕ ಸಾಕೇತ್ ರಾಜನ್ ಹತರಾಗುತ್ತಿದ್ದಂತೆ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಿತ್ತು. ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಜನರ ಬೆಂಬಲ ಮತ್ತು ಅನುಕಂಪವು ಹೋರಾಟಗಾರಿಗೆ ಸಿಕ್ಕಿತ್ತು. ಇದರ ನಡುವೆ ಪೊಲೀಸರ ಭಯವು ನಿರಂತರವಾಗಿ ಜನರನ್ನು ಕಾಡುತ್ತಿರುತ್ತಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಶರಣಾಗತಿ ಪ್ಯಾಕೇಜ್ ಘೋಷಣೆ:
ನಕ್ಸಲ್ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2005 ನವೆಂಬರ್ 8ರಂದು ಅಂದಿನ ಮುಖ್ಯ ಮಂತ್ರಿ ಎನ್.ಧರಂಸಿಂಗ್ ಅವರು ಮಂಗಳೂರಿನಲ್ಲಿ ಶರಣಾಗುವ ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದರು. ನಿರಂತರ ಹೋರಾಟ ಸಂಘರ್ಷದಿಂದ ಬೆಂದು ಬಸವಳದಿದ್ದ ಅನೇಕ ನಕ್ಸಲರು ಶಸ್ತ್ರತ್ಯಜಿಸಿ ಶರಣಾಗತರಾಗಿ ಹೊಸ ಜೀವನಕ್ಕೆ ಅಡಿ ಇಟ್ಟರು. ಸರಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ನೊಂದಿಗೆ ನಕ್ಸಲ್ ಸಮಸ್ಯೆಯುಳ್ಳ ಪ್ರದೇಶಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ ಈ ಪ್ರದೇಶದ ಅಭಿವೃದ್ಧಿ ಒತ್ತುಕೊಡುವ ಭರವಸೆ ನೀಡಿದ ಬಳಿಕ ತಮ್ಮ ಹೋರಾಟಕ್ಕೆ ಸಂದ ಜಯ ಎಂಬ ಸಾರ್ಥಕ ಭಾವದಿಂದ ಬಂದೂಕು ತೊರೆದು ಬಹುತೇಕ ನಕ್ಸಲರು, ನವಜೀವನಕ್ಕೆ ಕಾಲಿಟ್ಟರು.
ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದು:
2007ರ ಜುಲೈ 10ರಂದು ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಡೆಯರಮಠದಲ್ಲಿ ನಡೆದ ಎನ್ಕೌಂಟರ್ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್, ಕಾರ್ಮಿಕ ಸುಂದರೇಶ್, ಮನೆಯವರಾದ ರಾಮೇಗೌಡ್ಲು, ಕಾವೇರಿ ಹತರಾದ ಬಳಿಕ ಅಲ್ಲಿಂದ ನಕ್ಸಲ್ ಹೋರಾಟ ಸ್ವಲ್ಪಮಟ್ಟಿನ ತೀವ್ರತೆ ಕಳೆದುಕೊಳ್ಳುತ್ತಾ ಸಾಗಿತು. ಈ ನಡುವೆ ಸರಕಾರ ನಕ್ಸಲ್ ಪ್ರದೇಶಗಳ ಅಭಿವೃದ್ಧಿಗೆ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿ ನಕ್ಸಲರ ಶರಣಾಗತಿಗೆ ಆಹ್ವಾನಿಸಿದ ಬಳಿಕ ಅನೇಕರು ನಕ್ಸಲರು ಶರಣಾಗತರಾದರು. ಇಂದು ಜಿಲ್ಲೆಯಲ್ಲಿ ನಕ್ಸಲ್ ಹೋರಾಟ ಕ್ಷೀಣಿಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ಪ್ರದೇಶದಲ್ಲಿನ ಗಿರಿಜನರನ್ನು ಒಕ್ಕಲೆಬ್ಬಿಸಬಾರದೆಂಬ ಕೂಗು ಇಂದಿಗೂ ಹಾಗೇ ಜೀವಂತವಾಗಿದೆ.
ಜಿಲ್ಲೆಯಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ನಕ್ಸಲ್ ನಿಗ್ರಹ ಪಡೆ:
ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಗೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೇತ್ತುಕೊಂಡ ಸರಕಾರ 2005ರ ಮೇ. 26ರಂದು ನಕ್ಸಲರ ನಿಗ್ರಹಕ್ಕೆ ನಕ್ಸಲ್ ನಿಗ್ರಹ ವಿಶೇಷ ಪಡೆಯನ್ನೇ ನೇಮಕ ಮಾಡಿತು. (ಎಎನ್ಎಫ್) ಮಲೆನಾಡು ದಟ್ಟ ಅರಣ್ಯ ಪ್ರದೇಶ ಹೊಂದಿರುವ ಹಿನ್ನೆಲೆಯಲ್ಲಿ ವಿಶೇಷ ತರಬೇತಿಯನ್ನು ನೀಡಿ ಈ ಪಡೆಯನ್ನು ತಯಾರು ಮಾಡಲಾಯಿತು. ಈ ಪಡೆ ನಕ್ಸಲರೊಂದಿಗೆ ನಿರಂತರ ಹೋರಾಡಿ ನಕ್ಸಲ್ ಚಟುವಟಿಕೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸಿಯಾಯಿತು. ಸದ್ಯ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಕ್ಷೀಣಿಸಿದ್ದರೂ., ಮತ್ತೊಮ್ಮೆ ಇಂತಹ ಘಟನೆಗಳು, ರಕ್ತಪಾತಗಳು ನಡೆಯಬಾರದೆಂಬ ಹಿನ್ನೆಲೆಯಲ್ಲಿ ಇಂದಿಗೂ ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ, ಕಿಗ್ಗಾ, ಕೊಪ್ಪ ತಾಲ್ಲೂಕಿನ ಜಯಪುರ ಹಾಗೂ ರ್ತೀಹಳ್ಳಿ-ಶೃಂಗೇರಿ ಗಡಿಭಾಗ ದ್ಯಾವರೆಕೊಪ್ಪ ಭಾಗದಲ್ಲಿ ಇಂದಿಗೂ ಕೂಡ ನಕ್ಸಲ್ ನಿಗ್ರಹ ಪಡೆ ಕಾರ್ಯ ನಿರ್ವಹಿಸುತ್ತಿದೆ.
ಇಂದು ನಕ್ಸಲ್ ಮುಖಂಡ ವಿಕ್ರಂ ಗೌಡ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಕಳ ತಾಲೂಕಿನ ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಸಮೀಪದ ಹಳ್ಳಿಯೊಂದರಲ್ಲಿ ಪೊಲೀಸರು ಮತ್ತು ಎಎನ್ಎಫ್ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ ಗೌಡ ಹತ್ಯೆಯಾಗಿದ್ದು ಇತರೆ ಮೂವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ನೇತ್ರಾವತಿ ದಳದ ಮುಖ್ಯಸ್ಥರಾಗಿದ್ದ ವಿಕ್ರಂ ಗೌಡ ಕಳೆದ ಅನೇಕ ವರ್ಷಗಳಿಂದ ಕೇರಳದಲ್ಲಿ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದ್ದು, ಇತ್ತೀಚೆಗೆ 15 ದಿನಗಳ ಹಿಂದೆ ತನ್ನ ತಂಡದೊಂದಿಗೆ ಕರ್ನಾಟಕದತ್ತ ಮುಖ ಮಾಡಿದ್ದಾಗಿ ತಿಳಿದು ಬಂದಿದೆ.
ಇದಕ್ಕೆ ಪೂರಕ ಎನ್ನುವಂತೆ ಒಂದು ವಾರದ ಹಿಂದೆ ಕಾರ್ಕಳ ತಾಲೂಕಿನ ಕೆಲವು ಭಾಗಗಳಲ್ಲಿ ನಕ್ಸಲರ ಓಡಾಟದ ಮಾಹಿತಿಯು ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಲತಾ ತಂಡದ ಕೆಲವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡರ ಮನೆಗೆ ಬಂದಿದ್ದು, ಪೊಲೀಸರ ಕಾರ್ಯಚರಣೆ ಹಿನ್ನೆಲೆಯಲ್ಲಿ ನಕ್ಸಲರು ಪರಾರಿಯಾಗಿ ಅಲ್ಲಿ ಮೂರು ಬಂದೂಕುಗಳು ಪತ್ತೆಯಾಗಿದ್ದವು. ತಕ್ಷಣ ಕಾರ್ಯಪ್ರವೃತ್ತವಾದ ಎಂ ಎನ್ ಎಫ್ ಸಿಬ್ಬಂದಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು. ಸೋಮವಾರ ರಾತ್ರಿ ನಕ್ಸಲರು ಮತ್ತು ಪೊಲೀಸರ ಮುಖಮುಖಿಯಲ್ಲಿ ವಿಕ್ರಂ ಗೌಡ ಹತರಾಗಿದ್ದು ಪೊಲೀಸರು ಮೇಲುಗೈ ಸಾಧಿಸಿದ್ದಾರೆ.
ವಿಕ್ರಂ ಗೌಡ ವಿರುದ್ಧ ಚಿಕ್ಕಮಗಳೂರಿನಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡ ಮೂವರಿಗಾಗಿ ತೀವ್ರ ಶೋಧ ನಡೆಯುತ್ತಿದ್ದು, ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.