ಚಿಕ್ಕಮಗಳೂರು | ಮುಂದುವರಿದ ಶರಣಾಗತ ನಕ್ಸಲರ ವಿಚಾರಣೆ

ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಶರಣಾಗತರಾದ್ದರು
ಚಿಕ್ಕಮಗಳೂರು : ರಾಜ್ಯ ಸರಕಾರದ ಮುಂದೆ ಶರಣಾಗತರಾಗಿರುವ 6 ಮಂದಿ ನಕ್ಸಲರ ವಿಚಾರಣೆ ಜಿಲ್ಲೆಯಲ್ಲಿ ಮುಂದುವರಿದಿದ್ದು, ಮಂಗಳವಾರ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳು, ಅರಣ್ಯದಲ್ಲಿ ಟೆಂಟ್ ಪತ್ತೆ ಪ್ರಕರಣ, ಕರಪತ್ರ ಹಂಚಿಕೆ ಹಾಗೂ ಇತ್ತೀಚೆಗೆ ಕಡೆಗುಂದಿ ಗ್ರಾಮಕ್ಕೆ ಭೇಟಿ ನೀಡಿದ್ದ ಪ್ರಕರಣಗಳ ವಿಚಾರಣೆಯನ್ನು ಪೊಲೀಸರು ಶರಣಾಗತ ನಕ್ಸಲರ ಸಮ್ಮುಖದಲ್ಲಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಜ.8ರಂದು ಆರು ಜನ ನಕ್ಸಲರು ರಾಜ್ಯ ಸರಕಾರದ ಮುಂದೆ ಶರಣಾಗಿದ್ದರು. ನಂತರ ಇವರನ್ನು ಎನ್ಐಎ ವಶಕ್ಕೆ ನೀಡಲಾಗಿತ್ತು. ಎನ್ಐಎ ಕೋರ್ಟ್ ಅನುಮತಿ ಪಡೆದು ಜಿಲ್ಲೆಗೆ ಕರೆದಿರುವ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕರಣಗಳ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ನಕ್ಸಲರಾದ ಮುಂಡಗಾರು ಲತಾ ವಿರುದ್ಧ 33, ವನಜಾಕ್ಷಿ 15, ಜಯಣ್ಣ, ಸುಂದರಿ ಅವರ ಮೇಲೆ ತಲಾ 3 ಪ್ರಕರಣಗಳು ದಾಖಲಾಗಿದ್ದು, ಕೊಪ್ಪ, ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರು 14 ದಿನಗಳವರೆಗೂ ಶರಣಾಗತ ನಕ್ಸಲರನ್ನು ವಶಕ್ಕೆ ಪಡೆದಿದ್ದು, ಹಂತ ಹಂತವಾಗಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.