ಮುಳ್ಳಯ್ಯನಗಿರಿ-ಬಾಬಾ ಬುಡನ್ಗಿರಿ | ಪ್ರವಾಸಿಗರು, ವಾಹನ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ : ಸಚಿವ ಕೆ.ಜೆ.ಜಾರ್ಜ್
ಸಚಿವರಿಂದ ಗಿರಿಶ್ರೇಣಿ ಪರಿಶೀಲನೆ
ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ಗಿರಿ ಪ್ರವಾಸಿ ತಾಣಕ್ಕೆ ಅತೀ ಹೆಚ್ಚು ಪ್ರವಾಸಿಗರು, ವಾಹನಗಳು ಬರುತ್ತಿರುವುದರಿಂದ ಗಿರಿ ಭಾಗದಲ್ಲಿ ಕಂಪನದಂತಹ ಪ್ರಾಕೃತಿಕ ಅವಘಡಗಳು ಸಂಭವಿಸುವ ಸಾಧ್ಯತೆ ಬಗ್ಗೆ ತಜ್ಞರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರವಾಸಿಗರು ಮತ್ತು ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶುಕ್ರವಾರ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್ಗಿರಿ ಭಾಗದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಗಿರಿ ಭಾಗದಲ್ಲಿ ರಸ್ತೆಗಳು ಹಾಳಾಗಿದ್ದು, ಗ್ರಾಮೀಣ ಭಾಗದಲ್ಲೂ ಸಾರ್ವಜನಿಕ ರಸ್ತೆಗಳಿಗೆ ಅಪಾರ ಹಾನಿ ಸಂಭವಿಸಿದೆ. ರಸ್ತೆ ದುರಸ್ತಿಗಾಗಿ ಸರಕಾರ ಈಗಾಗಲೇ 17 ಕೋಟಿ. ರೂ. ಅನುದಾನ ಮಂಜೂರು ಮಾಡಿದ್ದು, ಮಳೆ ಕಡಿಮೆಯಾದ ಬಳಿಕ ದುರಸ್ತಿ ಕಾಮಗಾರಿಗಳು ನಡೆಯಲಿವೆ. ದುರಸ್ತಿ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆʼ ಎಂದರು.
ಗಿರಿ ಭಾಗದಲ್ಲಿ ಪ್ರವಾಸಿಗರಿಂದಾಗಿ ಗಿರಿಶ್ರೇಣಿ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನು ನಿಯಂತ್ರಣ ಮಾಡುವುದು ಅನಿವಾರ್ಯ. ಗಿರಿ ಭಾಗಕ್ಕೆ ಪ್ರತಿದಿನ 600 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗಿದ್ದು, ಹೆಚ್ಚುವರಿ ವಾಹನಗಳ ಸಂಚಾರಕ್ಕೆ ಹೆಚ್ಚು ಶುಲ್ಕ ವಿಧಿಸುವುದು, ನಗರಸಮೀಪದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವಂತಹ ಯೋಜನೆಗಳ ಅನುಷ್ಠಾನಕ್ಕೆ ಚಿಂತಿಸಲಾಗಿದೆ. ಪ್ರತಿದಿನ 600 ವಾಹನಗಳಿಗೆ ಮಾತ್ರ ಅವಕಾಶ ನೀಡಿ, ಹೆಚ್ಚುವರಿ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಪ್ರವಾಸಿಗರನ್ನು ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲಿ ಪ್ರವಾಸಿ ತಾಣಕ್ಕೆ ಕರೆದೊಯ್ಯುವ ಚಿಂತನೆಯನ್ನೂ ಜಿಲ್ಲಾಡಳಿತ ಮಾಡಿದೆ. ಸ್ಥಳೀಯರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.