ಗೊಲ್ಲರಹಟ್ಟಿ ಅಸ್ಪಶ್ಯತೆ ಆಚರಣೆ, ಮೂಡಿಗೆರೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ದಲಿತ, ಅಲ್ಪಸಂಖ್ಯಾತ ಸಂಘಟನೆಗಳ ವೇದಿಕೆ ಒತ್ತಾಯ
ಚಿಕ್ಕಮಗಳೂರು: ಜಿಲ್ಲೆಯ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ದಲಿತ ಯುವಕನಿಗೆ ಹಲ್ಲೆ ಮಾಡಿ ಅಸ್ಪಶ್ಯತೆ ಆಚರಿಸಿರುವ ಆರೋಪಿಗಳ ಬಂಧನ ಹಾಗೂ ಮೂಡಿಗೆರೆ ಪಟ್ಟಣದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಸಂಘಪರಿವಾರದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ, ಅಲ್ಪಸಂಖ್ಯಾತ ಸಂಘಟನೆಗಳ ವೇದಿಕೆ ವತಿಯಿಂದ ಧರಣಿ ನಡೆಸಲಾಯಿತು.
ದಲಿತ ಸಂಘಟನೆಗಳ ವೇದಿಕೆ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಶುಕ್ರವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ಗೊಲ್ಲರಹಟ್ಟಿಯಲ್ಲಿ ನಡೆದ ಅಸ್ಪಶ್ಯತೆ ಆಚರಣೆ ಹಾಗೂ ಮೂಡಿಗೆರೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ರಾಜ್ಯ ಸರಕಾರ ಹಾಗೂ ಗೃಹ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಗಳ ಮುಖಂಡರು, ರಾಜ್ಯದಲ್ಲಿ ಈ ಹಿಂದೆ ಕೋಮುವಾದಿಗಳ ಸರಕಾರ ಇತ್ತು. ಆ ಸರಕಾರದ ಅವಧಿಯಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ವ್ಯಾಪಕ ದೌರ್ಜನ್ಯ ನಡೆದಿದ್ದು, ಇಂತಹ ಸರಕಾರದಿಂದ ಶೋಷಿತ ಸಮುದಾಯಗಳಿಗೆ ರಕ್ಷಣೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರೂ ಸೇರಿದಂತೆ ಎಲ್ಲ ಸಮುದಾಯದಗಳ ಜನರು ಕೋಮುವಾದಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಆದರೆ, ರಾಜ್ಯದಲ್ಲಿಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ದೌರ್ಜನ್ಯ ನಡೆಸುವವರ ವಿರುದ್ಧ ಈ ಸರಕಾರ ಯಾವುದೇ ಕಾನೂನು ಕ್ರಮಕೈಗೊಳ್ಳದೆ ದಲಿತರು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿ ಬಡಾವಣೆ ನಿವಾಸಿಗಳು ಇಂದಿಗೂ ಅಂಧಕಾರದಲ್ಲಿ ಮುಳುಗಿ ಹೋಗಿದ್ದಾರೆ. ದೇಶ ತಾಂತ್ರಿಕವಾಗಿ ಭಾರೀ ಅಭಿವೃದ್ಧಿ ಸಾಧಿಸಿದೆ, ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಲು ಯೋಜನೆ ರೂಪಿಸುತ್ತಿದೆ. ಇಷ್ಟೆಲ್ಲಾ ಪ್ರಗತಿ ಸಾಧಿಸಿದ್ದರೂ ಕೆಲ ಸಮುದಾಯಗಳ ಜನರು ಇಂದಿಗೂ ಜಾತಿ, ಅಸ್ಪಶ್ಯತೆಯಂತಹ ಘನಘೋರ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದರು.
ಇತ್ತೀಚೆಗೆ ಗೊಲ್ಲರಹಟ್ಟಿ ಬಡಾವಣೆಯ ನಿವಾಸಿಗಳು ದಲಿತ ಯುವಕನನ್ನು ಕೆಲಸಕ್ಕೆ ಕರೆದೊಯ್ದಿದ್ದು, ಈ ವೇಳೆ ಯುವಕನ ಜಾತಿ ತಿಳಿದು ಮನಬಂದಂತೆ ಥಳಿಸಿದ್ದಲ್ಲದೇ ಹಲ್ಲೆ ಮಾಡಿ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ, ಬಡಾವಣೆಯಲ್ಲಿದ್ದ ದೇಗುಲ ಮೈಲಿಗೆ ಆಗಿದೆ ಎಂದು ಆತನಿಂದ ದಂಡವನ್ನೂ ಕಟ್ಟಿಸಿಕೊಂಡಿದ್ದಾರೆ. ಈ ಘಟನೆ ಇಡೀ ಮಾನವ ಕುಲ ತಲೆ ತಗ್ಗಿಸುವ ಘಟನೆಯಾಗಿದ್ದು, ದಲಿತ ಮುಖಂಡರ ಹೋರಾಟದ ಫಲವಾಗಿ 15 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ನಾಲ್ವರನ್ನು ಬಂಧಿಸಿ ಉಳಿದ ಆರೋಪಿಗಳ ಬಂಧನಕ್ಕೆ ನಿರ್ಲಕ್ಷ್ಯ ವಹಿಸಿ, ಅಸ್ಪಶ್ಯತೆ ಆಚರಿಸಿದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಿಕೊಂಡ ಸಂಘಪರಿವಾರದ ಕಿಡಿಗೇಡಿಗಳು ಆತನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡುವ ಮೂಲಕ ಅನೈತಿಕ ಪೊಲೀಸ್‌ಗಿರಿಯನ್ನು ಪ್ರದರ್ಶಿಸಿದ್ದಾರೆ. ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಯುವಕನಿಗೆ ಮಾರಣಾಂತಿಕ ಗಾಯಗಳಾಗಿದ್ದು, ಆತನ ಕಣ್ಣಿಗೂ ಹಾನಿ ಸಂಭವಿಸಿದೆ. ಈ ಘಟನೆ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ವಿಚಾರಣೆ ಮಾಡಿ ಕಳುಹಿಸಿದ್ದಾರೆ ಎಂದರು.
ಈ ಎರಡು ಘಟನೆಗಳಲ್ಲಿ ಸಂತ್ರಸ್ತರು ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ರಾಜ್ಯದ ಕಾಂಗ್ರೆಸ್ ಸರಕಾರ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಂಘಪರಿವಾರದವರು, ಜಾತೀವಾದಿಗಳು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಈ ಘಟನೆಗಳಿಗೆ ನೈತಿಕ ಹೊಣೆ ಹೊತ್ತು ಗೃಹಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಧರಣಿ ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮುಖಂಡರು ಮನವಿ ಸಲ್ಲಿಸಿದರು. ದಲಿತ ಸಂಘಟನೆಗಳ ವೇದಿಕೆ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಎಸ್‌ಡಿಪಿಐ ಮುಖಂಡ, ಅಂಗಡಿ ಚಂದ್ರು, ದಸಂಸ ಮುಖಂಡರಾದ ಯಲಗುಡಿಗೆ ಹೊನ್ನಪ್ಪ, ಭೀಮ್ ಆರ್ಮಿಯ ಹೊನ್ನೇಶ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಗೌಸ್‌ಮುನೀರ್, ಮೂಡಿಗೆರೆ ಜೆಡಿಎಸ್ ಮುಖಂಡ ಝಾಕಿರ್ ಝಕರಿಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಶರೀಫ್, ರಮೇಶ್, ಹುಣಸೇಮಕ್ಕಿ ಲಕ್ಷ್ಮಣ್, ಕೂದುವಳ್ಳಿ ಮಂಜುನಾಥ್ ಹಾಗೂ ಮೂಡಿಗೆರೆಯಲ್ಲಿ ಹಲ್ಲೆಗೊಳಗಾದ ಯುವಕನ ತಂದೆ ಮೊಹಿಯುದ್ದೀನ್, ತಾಯಿ ಜಮೀಲಾ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.