ಬಿಜೆಪಿ ನಾಯಕರಿಗೆ ತಲೆಬೋಳಿಸಿಕೊಳ್ಳುವ ಸಲಕರಣೆಗಳನ್ನು ಕಳುಹಿಸಿದ ಕಾಂಗ್ರೆಸ್
ಗ್ಯಾರಂಟಿ ಯೋಜನೆಗಳು ಜಾರಿಯಾದರೆ ತಲೆಬೋಳಿಸಿಕೊಳ್ಳುತ್ತೇವೆ ಎಂದಿದ್ದ ಬಿಜೆಪಿಯ ನಾಯಕರು
ಕೊಪ್ಪ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಯಾದರೆ ನಾವು ತಲೆ ಬೋಳಿಸಿಕೊಳ್ಳುತೇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಿಗೆ ಅಂಚೆ ಮೂಲಕ ತಲೆಬೋಳಿಸಿಕೊಳ್ಳುವ ಸಲಕರಣೆಗಳನ್ನು(ಬ್ಲೇಡ್) ಕಾಂಗ್ರೆಸ್ ಕೊಪ್ಪ ಘಟಕದ ವತಿಯಿಂದ ರವಿವಾರ ಕಳುಹಿಸಿಕೊಡಲಾಯಿತು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ 9 ತಿಂಗಳೊಳಗೆ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಿಗೆ, ತಮ್ಮ ಹೇಳಿಕೆ ನೆನಪಿಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿತ್ತು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಸುಳ್ಳು ಭರವಸೆಗಳು. ಅದನ್ನು ಜಾರಿ ಮಾಡುವುದಿಲ್ಲ. ಹಾಗೇನಾದರೂ ಜಾರಿ ಮಾಡಿದರೆ ನಾವು ತಲೆ ಬೋಳಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಧ್ಯಕ್ಷರು, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಮತ್ತಿತರರು ಹೇಳಿಕೆಗಳನ್ನು ನೀಡಿದ್ದರು. ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡಿದ್ದೇವೆ. ನೀವು ಹೇಳಿದಂತೆ ನಡೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರು ಸವಾಲೆಸೆದರು.
ರವಿವಾರ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿಯವರ ಕಛೇರಿಯಲ್ಲಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರ ನೇತೃತ್ವದಲ್ಲಿ ಅಂಚೆ ಮೂಲಕ ಸಲಕರಣೆಗಳನ್ನು ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.