ವೈಯಕ್ತಿಕ ನಿಲುವು ಏನೇ ಇದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧ: ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ
ಚಿಕ್ಕಮಗಳೂರು, ಜ.24: ಪಕ್ಷದ ತೀರ್ಮಾನ ಹಾಗೂ ಪಕ್ಷದ ಅಸ್ತಿತ್ವದ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಎಲ್ಲರೂ ಚರ್ಚಿಸಿ ಪಕ್ಷದ ಅಸ್ತಿತ್ವದ ಹಿನ್ನಲೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದಾರೆ. ನಮ್ಮ ವೈಯಕ್ತಿಕ ನಿಲುವು ಏನೇ ಇದ್ದರು. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
2006ರಲ್ಲಿ ಇದೇ ಪ್ರಶ್ನೆ ಉದ್ಭವವಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನೀಡಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಇರುವ ಬಹುತೇಕರು ಎಚ್.ಡಿ.ಕುಮಾರಸ್ವಾಮಿ ಜತೆ ಇದ್ದರು ಎಂದರು.
ಇಂದು ವಿಚಿತ್ರ ರಾಜಕೀಯ ಸನ್ನಿವೇಶ ಸಂದಿಗ್ಧ ಪರಿಸ್ಥಿತಿ ಎಲ್ಲರನ್ನು ಕಾಡುತ್ತಿದೆ. ಜಗದೀಶ್ ಶೆಟ್ಟರ್ ಕಟ್ಟ ಹಿಂದುತ್ವವಾದಿ. ಅವರ ಇಡೀ ಕುಟುಂಬ ಬಿಜೆಪಿಯಲ್ಲಿ ಗುರುತಿಸಿಕೊಂಡಿತ್ತು. ಅವರು ಕಾಂಗ್ರೆಸ್ ಪಕ್ಷ ಸೇರ ದ್ದಾರೆ ಎಂದರು.
ಲೋಕಸಭೆ ಚುನಾವಣೆ ಹಿನ್ನಲೆ ಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ತಿಳಿಸಿದರು.