ಚಿಕ್ಕಮಗಳೂರು: ಆಲ್ದೂರಿನಲ್ಲಿ ಅನೈತಿಕ ಪೊಲೀಸ್ ಗಿರಿ: ಆರು ಮಂದಿ ಬಜರಂಗ ದಳ ಕಾರ್ಯಕರ್ತರ ಬಂಧನ
ಚಿಕ್ಕಮಗಳೂರು, ಫೆ.9: ತಾಲೂಕಿನ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೈತಿಕ ಪೊಲೀಸ್ ಗಿರಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಯುವತಿಯೊಂದಿಗೆ ತಿರುಗಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಜರಂಗ ದಳ ಕಾರ್ಯಕರ್ತರು ಅಪಹರಿಸಿ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಆಲ್ದೂರು ಪಟ್ಟದ ನಿವಾಸಿ, ಡ್ಯಾನ್ಸ್ ಮಾಸ್ಟರ್ ರುಮಾನ್ ಹಲ್ಲೆಗೊಳಗಾದ ಯುವಕ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಸಿ.ಡಿ.ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್ ಹಾಗೂ ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ಯಾನ್ಸ್ ಮಾಸ್ಟರ್ ಆಗಿರುವ ತನ್ನನ್ನು ಆರೋಪಿಗಳು ಗುರುವಾರ ಕಾರಿನಲ್ಲಿ ಅಪಹರಿಸಿ ಬಳಿಕ ಕೂಡಿ ಹಾಕಿ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರುಮಾನ್ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರತಿದೂರು: ಈ ನಡುವೆ ಅಪ್ರಾಪ್ತ ವಯಸ್ಸಿನ ತನ್ನ ಪುತ್ರಿಯನ್ನು ಮುರ್ಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿಯ ಪೋಷಕರು ನೀಡಿರುವ ದೂರಿನಂತೆ ರುಮಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.