ಚಿಕ್ಕಮಗಳೂರು | ವಸತಿ ಶಾಲೆ ಶಿಕ್ಷಕಿಯಿಂದ ವಿದ್ಯಾರ್ಥಿನಿಯರಿಗೆ ಹಲ್ಲೆ, ಕಿರುಕುಳ ಆರೋಪ: ಕಾನೂನು ಕ್ರಮಕ್ಕೆ ದಲಿತ ಮುಖಂಡರಿಂದ ಒತ್ತಾಯ
ಚಿಕ್ಕಮಗಳೂರು: ನಗರದ ಪೊಲೀಸ್ ಬಡಾವಣೆ ಸಮೀಪವಿರುವ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ವಸತಿ ಶಾಲೆಯ ಶಿಕ್ಷಕಿ ಪ್ರತಿದಿನ ಹಲ್ಲೆ ಮಾಡುತ್ತಿರುವುದಲ್ಲದೇ ಕಿರುಕುಳ ನೀಡುತ್ತಾರೆಂದು ಆರೋಪ ಕೇಳಿ ಬಂದಿದ್ದು, ಮಂಗಳವಾರ ಬಾಲಕಿಯರ ಪೋಷಕರು ಹಾಗೂ ದಲಿತಪರ ಸಂಘಟನೆಗಳ ಮುಖಂಡರು ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲವಾಗಿದ್ದು, ಕಾಫಿ ಗೋಡನ್‍ವೊಂದರಲ್ಲಿ ವಸತಿ ಶಾಲೆಯನ್ನು ನಡೆಸಲಾಗುತ್ತಿದೆ. ಈ ವಸತಿ ಶಾಲೆಯ ಹಿಂದಿ ಶಿಕ್ಷಕಿ ಶಾಲೆಯ ಹೆಣ್ಣು ಮಕ್ಕಳಿಗೆ ವಿನಾಕರಾಣ ಹಲ್ಲೆ ಮಾಡುತ್ತಾರೆಂದು ಪೋಷಕರು, ಮಕ್ಕಳು ಆರೋಪಿಸಿದ್ದು, ಈ ಆರೋಪದ ಮೇರೆಗೆ ಬುಧವಾರ ದಲಿತ ಸಂಘಟನೆಗಳ ಮುಖಂಡರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮುಖಂಡರು ವಸತಿ ಶಾಲೆಯ ಮಕ್ಕಳನ್ನು ವಿಚಾರಿಸಿದ್ದು, ಈ ವೇಳೆ ಸುಮಾರು 40 ಮಕ್ಕಳು, ಮುಖಂಡರಿಗೆ ಲಿಖಿತ ದೂರು ನೀಡಿದ್ದಲ್ಲದೇ, ಶಿಕ್ಷಕಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು ಎನ್ನಲಾಗಿದೆ. ಶಿಕ್ಷಕಿ ಕಾರಣವಿಲ್ಲದೇ ಹಲ್ಲೆ ಮಾಡುತ್ತಾರೆ. ಹಲ್ಲೆಯಿಂದ ಕೆಲ ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವ ಬಗ್ಗೆಯೂ ಮಕ್ಕಳು ದೂರು ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಶಿಕ್ಷಕಿ ನೀಡುತ್ತಿದ್ದ ಕಿರುಕುಳ, ಹಲ್ಲೆ ಬಗ್ಗೆ ಮಕ್ಕಳು ತಮ್ಮ ಪೋಷಕರ ಬಳಿ ಹೇಳಿಕೊಳ್ಳಲು ಅವಕಾಶ ಸಿಗುತ್ತಿರಲಿಲ್ಲ. ಪೋಷಕರ ಬಳಿ ಹೇಳಿದರೆ ಹೊಡೆಯುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದರು ಎಂದು ಮಕ್ಕಳು ದೂರಿದ್ದು, ಕೆಲ ದಿನಗಳ ಹಿಂದೆ ಪೋಷಕರೊಬ್ಬರು ವಸತಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳ ಕೈಯಲ್ಲಿದ್ದ ಗಾಯದ ಗುರುತು ಕಂಡು ಮಕ್ಕಳನ್ನು ಪ್ರಶ್ನಿಸಿದಾಗ ಶಿಕ್ಷಕಿ ಹಲ್ಲೆ, ಕಿರುಕುಳ ನೀಡುವ ವಿಚಾರವನ್ನು ಪೋಷಕರ ಬಳಿ ಹೇಳಿಕೊಂಡಿರುವುದನ್ನು ಮಕ್ಕಳು ತಿಳಿಸಿದ್ದಾರೆ ಎನ್ನಲಾಗಿದೆ.
ಮಕ್ಕಳ ಅಳಲು ಕೇಳಿದ ಮುಖಂಡರು ವಸತಿ ಶಾಲೆಯ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ದೂರು ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಯೋಗೀಶ್ ಬಳಿ ಪೋಷಕರು, ಮಕ್ಕಳು ದೂರು ಹೇಳಿಕೊಂಡಿದ್ದಲ್ಲದೇ, ವಸತಿ ಶಾಲ್ಲೆಯಲ್ಲಿ ಮಕ್ಕಳಿಗೆ ಮೂಲಸೌಕರ್ಯವಿಲ್ಲದಿರುವ ಬಗ್ಗೆಯೂ ದೂರಿದ್ದಾರೆ. ವಿದ್ಯಾರ್ಥಿನಿಯರು ಮಲಗುವ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಿಟಕಿ ಇಲ್ಲದಿರುವ ಬಗ್ಗೆಯೂ ದೂರು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿಕ್ಷಕಿ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು. ಮತ್ತೆ ಕಿರುಕುಳ ಮುಂದುವರಿದಲ್ಲಿ ಶಾಲಾ ಆವರಣದಲ್ಲೇ ಪ್ರತಿಭಟನೆ ನಡೆಸಲಾಗುವುದು ಮುಖಂಡರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‍ಕುಮಾರ್, ಮುಖಂಡರಾದ ಗಂಗಾಧರ್, ಹರೀಶ್, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.