ಮಳೆಯಿಂದ ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಜೀವಕಳೆ
ವಾರಾಂತ್ಯದಲ್ಲಿ ಜಿಲ್ಲೆಗೆ ಹರಿದು ಬಂದ ಜನಸಾಗರ
ಚಿಕ್ಕಮಗಳೂರು : ಕಾಫಿನಾಡಿನಾದ್ಯಂತ ಸದ್ಯ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಜೀವಕಳೆ ಪಡೆದುಕೊಂಡಿದೆ. ಹಚ್ಚ ಹಸಿರಿನ ಗಿರಿಸಾಲುಗಳು, ಝರಿ, ಜಲಪಾತಗಳು ಮೈದುಂಬಿಕೊಂಡಿದ್ದು, ಈ ಸುಂದರ ಪ್ರಕೃತಿ ಸೌಂದರ್ಯಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿನಾಡಿಗೆ ದೌಡಾಯಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಶನಿವಾರ, ರವಿವಾರ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಿದ್ದವು.
ಮಲೆನಾಡಿನಾದ್ಯಂತ ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ಇಲ್ಲಿನ ಝರಿ ಜಲಪಾತಗಳು, ನದಿ, ತೊರೆ, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಬಿಸಿಲಧಗೆಯಿಂದ ಸೊರಗಿದ್ದ ಗಿರಿಶ್ರೇಣಿಗಳಲ್ಲಿ ಹಸಿರು ಚಿಗುರೊಡೆದಿದೆ. ಮಳೆಯ ಅಬ್ಬರಿಂದಾಗಿ ಬೆಟ್ಟಗುಡ್ಡಗಳ ಸಾಲುಗಳಲ್ಲಿ ಮಂಜು ಮುಸುಕಿದ ವಾತಾವರಣ, ಹಾಲ್ನೊರೆಯಂತೆ ಧುಮುಕಿ ಹರಿಯುವ ಜಲಪಾತಗಳ ಸೊಬಗು, ಹಸಿರ ವನಸಿರಿ, ವನ್ಯಜೀವಿಗಳು ಸೇರಿದಂತೆ ಪ್ರಾಕೃತಿಯ ರಮಣೀಯತೆ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾಫಿನಾಡಿಗೆ ಸಾಗರೋಪಾದಿಯಲ್ಲಿ ಲಗ್ಗೆ ಇಡಲಾರಂಭಿಸಿದ್ದಾರೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದಲ್ಲಿನ ಸಿರಿಮನೆ ಜಲಪಾತ, ಮೈದುಂಬಿ ಹರಿಯುತ್ತಿದೆ. ಹಾಗೆಯೇ ಮುಳ್ಳಯ್ಯನಗಿರಿ, ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ತೆರಳುವ ಮಾರ್ಗಮಧ್ಯೆ ಸಿಗುವ ದಭೆ ಫಾಲ್ಸ್, ಹೊನ್ನಮ್ಮನ ಹಳ್ಳ, ಮಾಣಿಕ್ಯಧಾರ ಜಲಪಾತ ಹಾಗೂ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟಿ ಪ್ರದೇಶದ ಉದ್ದಕ್ಕೂ ಬಂಡೆಗಳ ಮೇಲಿನ ನೀರಿನ ಸೆಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವಾಹನ ಸವಾರರು ರಸ್ತೆಬದಿಯಲ್ಲಿ ವಾಹನವನ್ನು ನಿಲ್ಲಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಂಜು ಆವರಿಸಿದ ಬೆಟ್ಟಗುಡ್ಡಗಳ ಮನಮೋಹಕ ದೃಶ್ಯಗಳನ್ನು ಸಾವಿರಾರು ಜನರು ನಿತ್ಯ ಆಸ್ವಾಧಿಸುತ್ತಿದ್ದಾರೆ.
ಜಿಲ್ಲೆಯ ಕೆಮ್ಮಣ್ಣಗುಂಡಿ, ಹೆಬ್ಬೆ ಜಲಪಾತ, ಕಲ್ಲತ್ತಗಿರಿ ಜಲಪಾತವನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ. ಶನಿವಾರ, ರವಿವಾರದ ವಾರಾಂತ್ಯದಲ್ಲಿ ಮುಳ್ಳಯ್ಯನಗಿರಿ, ಗುರುದತ್ತಾತ್ರೇಯ ಬಾಬಾ ಬುಡನ್ ದರ್ಗಾ, ಮಾಣಿಕ್ಯಧಾರ, ಹಾಗೂ ಹೊನ್ನಮ್ಮನ ಹಳ್ಳದ ವರ್ಣರಂಜಿತ ಪ್ರಕೃತಿ ಸೌಂದರ್ಯವನ್ನು ಆಸ್ವಾಧಿಸಲು ಬೈಕ್, ಕಾರು, ಮಿನಿಬಸ್‍ಗಳಲ್ಲಿ ಅಂದಾಜು 7-10ಸಾವಿರ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾಧಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರ ಮನೆ ಧಾರ್ಮಿಕ ಕ್ಷೇತ್ರ ಹಾಗೂ ಸುಂದರ ಗಿರಿಶ್ರೇಣಿಗಳನ್ನು ಹೊಂದಿದ್ದು, ಇಲ್ಲಿಗೂ ರವಿವಾರ ಪ್ರವಾಸಿಗರ ದಂಡು ಹರಿದು ಬಂದಿದೆ. ದೇವರ ಮನೆಗೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಲ್ಲಿಗೆ ತೆರಳುವ ಮಾರ್ಗ ಕಿರಿದಾಗಿದ್ದು, ದೊಡ್ಡ ಬಸ್‍ನಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಾಳಿ ಮಳೆಯಲ್ಲೇ ಪ್ರವಾಸಿಗರು ಸಿಲುಕಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಗೆ ದೊಡ್ಡ ವಾಹನದಲ್ಲಿ ಪ್ರವಾಸಿಗರು ಆಗಮಿಸುವುದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರವಾಸಿಗರ ನಿಯಂತ್ರಣಕ್ಕೆ ಆನ್‍ಲೈನ್ ನೋಂದಣಿ?
ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕಲು ಸರಕಾರ ಆನ್‍ಲೈನ್ ನೋಂದಣಿಗೆ ಮುಂದಾಗಿದೆ. ಮುಳ್ಳಯ್ಯನಗಿರಿ ಮತ್ತು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಪ್ರದೇಶಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಆನ್‍ಲೈನ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಲು ಸರಕಾರ ಸಿದ್ಧತೆ ನಡೆಸಿದ್ದು, ಇದರಿಂದ ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಆನ್‍ಲೈನ್ ನೋಂದಣಿಗೆ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ವಿರೋಧದ ಮಧ್ಯೆಯೂ ಆನ್‍ಲೈನ್ ನೋಂದಣಿ ವ್ಯವಸ್ಥೆಯನ್ನು ಸರಕಾರ ಜಾರಿ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.