ಚಿಕ್ಕಮಗಳೂರು | ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ : ಅಲ್ಲಲ್ಲಿ ಧರೆಗುರುಳಿದ ಮನೆಗಳು, ಮರಗಳು
ಹೆಬ್ಬಾಳೆ ಸೇತುವೆ ಮುಳುಗಡೆ ; ಕಳಸ- ಹೊರನಾಡು ಸಂಪರ್ಕ ಕಡಿತ
ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ಧಾರಾಕಾರ ಮಳೆಯಿಂದಾಗಿ ಭಾರೀ ಅವಾಂತರಗಳು ಸಂಭವಿಸುತ್ತಿವೆ. ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಕಳಸ ಸಮೀಪದಲ್ಲಿ ಹರಿಯುವ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕಳಸ-ಹೊರನಾಡು ಸಂಪರ್ಕದ ಸೇತುವೆ ನದಿ ನೀರಿನಲ್ಲಿ ಮುಳುಗಿದೆ. ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿ ಹಸುವೊಂದು ಸಾರ್ವಜನಿಕರ ಕಣ್ಣೆದುರೇ ಕೊಚ್ಚಿ ಹೋದ ಘಟನೆ ನಡೆದಿದೆ. ಉಳಿದಂತೆ ಮರಗಳು, ವಿದ್ಯುತ್ ಕಂಬಗಳು, ಮನೆ, ಭೂಕುಸಿತ ಹಾಗೂ ಸಂಪರ್ಕ ಕಡಿತದಂತಹ ಘಟನೆಗಳು ಜಿಲ್ಲಾದ್ಯಂತ ವರದಿಯಾಗಿವೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಜನರು ಮನೆಗಳಿಂದ ಹೊರ ಬಾರದಂತಾಗಿದ್ದು, ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಹರಿಯುವ ಹೇಮಾವತಿ, ತುಂಗಾ, ಭದ್ರಾ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ನೆರೆ ನೀರು ಹೊಲ ಗದ್ದೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು-ಕಳಸ ಪಟ್ಟಣ ಸಂಪರ್ಕ ಕಡಿತಗೊಂಡಿದೆ. ಹಳುವಳ್ಳಿ ಗ್ರಾಮದ ಮೂಲಕ ಹೊರನಾಡು ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರೀ ಮಳೆ ಪರಿಣಾಮ ಗುರುವಾರ ದಾರಿ ತಪ್ಪಿದ ಹಸುವೊಂದು ಹೆಬ್ಬಾಳೆ ಸೇತುವೆ ಮೇಲೆ ಹೋಗಿದ್ದು, ನದಿಯ ನೀರಿನ ರಭಸಕ್ಕೆ ಹಸು ಸೇತುವೆಯಿಂದ ಕೆಳಗೆ ಬಿದ್ದು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಈ ವೇಳೆ ಸ್ಥಳೀಯರು ಸೇತುವೆಯ ದಡದಲ್ಲೇ ಇದ್ದರೂ ನೀರಿನ ಹಸುವನ್ನು ರಕ್ಷಣೆ ಮಾಡಲಾಗದೇ ಅಸಹಾಯಕರಾಗಿದ್ದರಿಂದ ಜನರ ಕಣ್ಣೆದುರೇ ಹಸು ನದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದೆ.
ಭಾರೀ ಮಳೆ ಗಾಳಿಯಿಂದಾಗಿ ಕಳಸ ಪಟ್ಟಣ ಸಮೀಪದ ಗಂಗನಕುಡಿಗೆ ಎಂಬಲ್ಲಿ ಅಕೇಶಿಯ ಮರಗಳು ರಸ್ತೆ ಉರುಳಿದ ಪರಿಣಾಮ ಕಳಸ-ಕೊಟ್ಟಿಗೆಹಾರ ರಸ್ತೆಯಲ್ಲಿ ಕೆಲ ಹೊತ್ತು ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಇನ್ನು ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದಾಗಿ ಕುದುರೆಮುಖ ಸಮೀಪದಲ್ಲಿ ಭದ್ರಾ ನದಿಯ ನರೆ ನೀರು ಕಳಸ-ಕುದುರೆಮುಖ ರಸ್ತೆಗೆ ನುಗ್ಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.
ಮೂಡಿಗೆರೆ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದುವರೆಗೆ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಬುಧವಾರ ಬೆಳಕ್ಕೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮನೆ ಕುಸಿದಿದ್ದು, ಈ ವೇಳೆ ಮಹಿಳೆ ಮನೆಯಲ್ಲೇ ಇದ್ದರಾದರೂ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ನದಿ ಸೇರಿದಂತೆ ಹಳ್ಳಕೊಳ್ಳಗಳೂ ತುಂಬಿ ಹರಿಯುತ್ತಿದ್ದು, ಹೇಮಾವತಿ ನದಿಯ ನೆರೆ ನೀರು ಅಕ್ಕಪಕ್ಕದ ಹೊಲ, ಗದ್ದೆ, ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಗೋಣಿಬೀಡು, ಚಾರ್ಮಾಡಿ ಘಾಟ್, ಕಿರುಗುಂದ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಘಾಟಿಯುದ್ದಕ್ಕೂ ಝರಿ, ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಘಾಟಿಯುದ್ದಕ್ಕೂ ಜಲರಾಶಿಯ ದೃಶ್ಯ ಸಾರ್ವಜನಿಕರನ್ನು ಸೆಳೆಯುತ್ತಿವೆ.
ಶೃಂಗೇರಿ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ನದಿಯ ನೆರೆ ನೀರು ಶೃಂಗೇರಿ ಪಟ್ಟಣದ ಗಾಂಧಿ ಮೈದಾನವನ್ನು ಆವರಿಸಿಕೊಂಡಿದ್ದು, ಮೈದಾನದಲ್ಲಿದ್ದ ಅಂಗಡಿಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ನದಿ ಪಕ್ಕದ ಶೃಂಗೇರಿ-ಮಂಗಳೂರು ಸಂಪರ್ಕ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು 50 ಅಡಿ ಉದ್ದದ ಬಿರುಕು ಉಂಟಾಗಿದೆ. ರಸ್ತೆ ಬಿರುಕಿನಿಂದಾಗಿ ಹೆದ್ದಾರಿಯೇ ಕುಸಿಯುವ ಆತಂಕ ಉಂಟಾಗಿದೆ. ಈ ರಸ್ತೆಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕವೂ ಉಂಟಾಗಿದೆ.
ಜಿಲ್ಲೆಯ ಬಯಲು ಭಾಗದಲ್ಲೂ ಬುಧವಾರ ಮಳೆ ಬಿರುಸು ಪಡೆದುಕೊಂಡಿದೆ. ಚಿಕ್ಕಮಗಳೂರು ನಗರದಲ್ಲಿ ಮುಂಜಾನೆ ಬಿಡುವು ನೀಡಿದ್ದ ಮಳೆ ಬೆಳಗ್ಗೆಯಿಂದ ಸಂಜೆವರೆಗೂ ಆರ್ಭಟಿಸಿದೆ. ಧಾರಾಕಾರ ಮಳೆಯಿಂದಾಗಿ ಇಡೀ ನಗರದಲ್ಲಿ ವಾಹನ, ಜನಸಂಚಾರಕ್ಕೂ ತೊಂದರೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕಾಲೇಜು ಮಕ್ಕಳು ಬೆಳಗ್ಗೆ ಸಂಜೆ ಮನೆಗಳಿಗೆ ಹಿಂದಿರುಗಲು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಬುಧವಾರ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಭಾರೀ ಮಳೆ ಪರಿಣಾಮ ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳಿಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲಾದ್ಯಂತ ವಿದ್ಯುತ್ ಕಂಬಗಳು ಧರೆಗುರುಳಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಹಲವಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.