ಅರಣ್ಯ ಯೋಜನೆಗಳ ವಿರುದ್ಧ ಕರೆ ನೀಡಿದ್ದ ಶೃಂಗೇರಿ ಬಂದ್ ಯಶಸ್ವಿ
ಅರಣ್ಯ ಯೋಜನೆಗಳಿಂದ ಮಲೆನಾಡಿಗರ ರಕ್ಷಣೆಗೆ ಸರಕಾರ ಭರವಸೆ ನೀಡಿದೆ : ಶಾಸಕ ಟಿ.ಡಿ.ರಾಜೇಗೌಡ
ಕೊಪ್ಪ: ಮಲೆನಾಡಿನ ರೈತರು ಭೂಮಿಯನ್ನು ದೋಚಿಲ್ಲ, ಭೂಮಿ, ಕಾಡನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಸಂರಕ್ಷಿಸಿರುವ ಭೂಮಿಯನ್ನು ಫಲವತ್ತಾಗಿ ಮಾಡಿದ್ದಾರೆ. ದೇಶದ ಜನರಿಗೆ ಆಹಾರೋತ್ಪನ್ನಗಳನ್ನು ಪೂರೈಕೆ ಮಾಡುವುರ ಜೊತೆಗೆ ರಾಜ್ಯ, ದೇಶದ ಬೊಕ್ಕಸಕ್ಕೆ ಆದಾಯವನ್ನು ನೀಡುತ್ತಿದ್ದಾರೆ. ಆದ್ದರಿಂದ ಮಲೆನಾಡಿನ ರೈತರನ್ನು ಅರಣ್ಯ ಒತ್ತುವರಿ, ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಸರಕಾರ ಒಕ್ಕಲೆಬ್ಬಿಸಬಾರದು. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಮಾತನಾಡಿದ್ದು, ರೈತರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುವ ಭರವಸೆಯನ್ನು ಸಚಿವರು, ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.
ಅರಣ್ಯ ಒತ್ತುವರಿ, ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಹಾಗೂ ಮಲೆನಾಡ ವಾಸಿಗಳಿಗೆ ಮಾರಕವಾಗಿರುವ ಅರಣ್ಯ ಕಾಯ್ದೆಗಳ ವಿರುದ್ಧ ಮಲೆನಾಡು ರೈತ ನಾಗರಿಕ ಹಿತ ರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ಬಂದ್ ಅಂಗವಾಗಿ ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಯಾವುದೇ ಮೂಲೆಯಲ್ಲಿ ಅವಘಡಗಳು ಉಂಟಾದರೇ ಮಲೆನಾಡಿನತ್ತ ಬೊಟ್ಟು ಮಾಡುವ ಕೆಟ್ಟ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಮಲೆನಾಡಲ್ಲಿ ಅರಣ್ಯ ಒತ್ತುವರಿ ಮಾಡಲಾಗುತ್ತಿದೆ, ಕಾಡು ಕಡಿಯುತ್ತಿದ್ದಾರೆ. ಇದರಿಂದಲೇ ಅತಿವೃಷ್ಠಿ, ಭೂ ಕುಸಿತವಾಗುತ್ತಿದೆ ಎಂದು ಸುಳ್ಳು ಹೇಳುವ ಕೆಲಸ ಕೆಲ ಪರಿಸರವಾದಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗುತ್ತಿದೆ. ಮಲೆನಾಡಿನ ವಾಸ್ತವ ಸ್ಥಿತಿಯನ್ನು ಅರಿಯದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಡೀಮ್ಡ್ ಫಾರೆಸ್ಟ್, ಸೆಕ್ಷನ್ 4, ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದ್ದಾರೆ. ಇದರಿಂದ ಮಲೆನಾಡಿನ ಜನತೆ ಹಾಗೂ ರೈತರಿಗೆ ಸಮಸ್ಯೆಯಾಗಿದೆ ಎಂದರು.
ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಕಾನೂನು ರೂಪಿಸಿದೆ. ಕಾಯ್ದೆಯನ್ನು ರೂಪಿಸುವಾಗ ಶಾಸನಬದ್ಧವಾಗಿ, ತಜ್ಞರ ಅಭಿಪ್ರಾಯ ಪಡೆದು ರೂಪಿಸಬೇಕು. ಆದರೆ ಅರಣ್ಯ ಇಲಾಖೆ ಇವೆಲ್ಲವನ್ನೂ ಗಾಳಿ ತೂರಿ ಕಾನೂಗಳನ್ನು ಮಾಡುತ್ತಿರುವ ಪರಿಣಾಮ ಮಲೆನಾಡಿನ ಜನರಿಗೆ ಸಂಕಷ್ಟ ಎದುರಾಗಿದೆ. ಬಡವರ, ರೈತರ, ಕೂಲಿ ಕಾರ್ಮಿಕರ ಬದುಕು ಬೀದಿಗೆ ತರುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಈಗಾಗಲೇ ಸದನದಲ್ಲಿ ಮಾತನಾಡಿದ್ದೇನೆ. ಮುಖ್ಯಮಂತ್ರಿ, ಅರಣ್ಯ ಸಚಿವರ ಜತೆಯಲ್ಲಿ ಚರ್ಚಿಸಿದ್ದೇನೆ. ಒತ್ತುವರಿ ತೆರವು ಮಾಡದಂತೆ ಸಚಿವರ ಜತೆಯಲ್ಲಿ ಮಾತನಾಡಿದ್ದೇವೆ. ರೈತರಿಗೆ ಸಮಸ್ಯೆಯಾಗಂತೆ ನೋಡಿಕೊಳ್ಳುತ್ತೇನೆ. ಮಲೆನಾಡಿನಿಂದ ಹೋರಾಟ ಸಮಿತಿಯೊಂದಿಗೆ ಮತ್ತೊಮ್ಮೆ ನಿಯೋಗ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಾಗ್ದಾನ ನೀಡಿದರು.
ಮಾಜಿ ಸಚಿವ ಜೀವರಾಜ್ ಮಾತನಾಡಿ, ಮಲೆನಾಡಿನಲ್ಲಿ ಸರಕಾರಗಳು, ಇಲಾಖೆಗಳು ಮಾಡುವ ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ ಕುಸಿತ, ಧರೆ ಕುಸಿತ ಉಂಟಾಗುತ್ತಿದೆ. ಅರಣ್ಯ ಇಲಾಖೆಯವರು ಟ್ರಂಚ್ ಹೊಡೆದ ಪರಿಣಾಮ ಹಾಗೂ ಓ.ಎಫ್.ಸಿ ಕೇಬಲ್‍ಗೆ ಗುಂಡಿ ತೋಡಿದ ಪರಿಣಾಮ ಕುಸಿತಗಳು ಉಂಟಾಗಿದೆಯೇ ಹೊರತು, ರೈತ ಕೃಷಿ ಮಾಡಿದ ಜಮೀನುಗಳಲ್ಲಿ ಭೂಕುಸಿತವಾಗಿಲ್ಲ. ಮಲೆನಾಡಲ್ಲಿ ಕಾಡುಪ್ರಾಣಿಗಳು ನಮ್ಮ ಬಳಿ ಬಂದರೂ, ನಾವು ಕಾಡು ಪ್ರಾಣಿಗಳ ಬಳಿ ಹೋದರೂ ಮುನುಷ್ಯನದ್ದೇ ತಪ್ಪು ಎಂಬಂತಾಗಿದೆ. ಇದು ಬದಲಾಗಬೇಕು. ಜೀವವೈವಿದ್ಯತೆಯಲ್ಲಿ ಮನುಷ್ಯರೂ ಕೂಡ ಒಂದು ಎಂಬುದು ಅಧಿಕಾರಿಗಳು ತಿಳಿದುಕೊಳ್ಳಬೇಕು. ರೈತರ ಒತ್ತುವರಿ ತೆರವು ಕಾರ್ಯ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗಬಾರದು ಎಂದರು.
ಧರಣಿಯಲ್ಲಿ ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ, ರಂಜಿತ್ ಶೃಂಗೇರಿ, ಅಭಿಷೇಕ್ ಹೊಸಳ್ಳಿ, ಪ್ರಮುಖರಾದ ಪುರುಶೋತ್ತಮ್ ಕೂಸ್ಗಲ್, ರತ್ನಾಕರ್ ಗಡಿಗೇಶ್ವರ, ರಾಕೇಶ್ ಹಿರೇಕೊಡಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಜೆಡಿಎಸ್ ತಾಲೂಕು ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಜಿ.ಪಂ ಮಾಜಿ ಸದಸ್ಯ ಎಸ್.ಎನ್.ರಾಮಸ್ವಾಮಿ ಭಾಗವಹಿಸಿದ್ದರು.
"ಮಲೆನಾಡು ಭಾಗದಲ್ಲಿ ಉದ್ಭ್ಭವಿಸಿರುವ ಅರಣ್ಯ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಲು ನಾನು ಸಿದ್ದನಿದ್ದೇನೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳ ಜತೆಯಲ್ಲಿ ಮಾತುಕತೆ ನಡೆಸಲು ಬದ್ಧ. ಮಲೆನಾಡ ವಾಸಿಗಳಿಗೆ ಅತಂಕ ಬೇಡ. ಈ ವಿಷಯದಲ್ಲಿ ರಾಜಕಾರಣ ಮಾಡಲ್ಲ. ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರು ಯಾವುದೇ ಅವಸರದ ಆದೇಶವನ್ನು ನೀಡದೇ ಇಲ್ಲಿನ ಜನಜೀವನ ಸಮಸ್ಯೆಯನ್ನು ಆರ್ಥೈಸಿಕೊಳ್ಳಬೇಕಾಗಿದೆ. ಅಧಿಕಾರಿಗಳು ಮಲೆನಾಡು ಭಾಗದ ರೈತರ ಒಂದಿಂಚು ಜಾಗವನ್ನು ಮುಟ್ಟಬಾರದು. ಮಲೆನಾಡಲ್ಲಿ ಅಡಿಕೆ, ಕಾಫಿ, ರಬ್ಬರ್, ಟೀ ಬೆಳೆದಿದ್ದಾರೆ. ಕಸ್ತೂರಿ ರಂಗನ್ ವರದಿಯಲ್ಲಿ ಸ್ಯಾಟಲೈಟ್ ಪಿಚ್ಚರ್ ತೆಗೆದು ತೋಟಗಳನ್ನು ಕಾಡು ಎಂದು ದಾಖಲಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ್ದೇವೆ. ಮುಂದೆಯೂ ಈ ಮಾತನ್ನು ಗಟ್ಟಿಗೊಳಿಸುತ್ತೇನೆ. ರಾಜ್ಯ ಸರಕಾರದೊಂದಿಗೆ ಚರ್ಚಿಸಲು ಶಾಸಕ ರಾಜೇಗೌಡ ಅವರನ್ನೂ ಕರೆಕೊಂಡು ಹೋಗುತ್ತೇನೆ. ಮಲೆನಾಡಿನ ಜನರು ಆತಂಕ ಪಡುವುದು ಬೇಡ"
- ಕೋಟ ಶ್ರೀನಿವಾಸ ಪೂಜಾರಿ, ಸಂಸದ
ಬಂದ್ ಯಶಸ್ವಿ: ಬಂದ್ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭೆ ಕ್ಷೇತ್ರದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್ ಬೆಂಬಲಿಸಿದ್ದರು. ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದ ಸಂಜೆವರೆಗೆ ಬಂದ್ ಆಗಿದ್ದವು. ಖಾಸಗಿ ಸಾರಿಗೆ ಬಸ್‍ಗಳ ಸಂಚಾರ, ಆಟೊ ಸಂಚಾರ ಸ್ಥಗಿತಗೊಂಡಿತ್ತು. ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಪಟ್ಟಣಗಳಲ್ಲಿ ಜನ, ವಾಹನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು. ಬಂದ್ ಹಿನ್ನೆಲೆಯಲ್ಲಿ ಕೊಪ್ಪ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಾರ್ವಜಜನಿಕರು, ರೈತರೂ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದು, ಒಟ್ಟಾರೆ ಶನಿವಾರ ಕರೆ ನೀಡಿದ್ದ ಶೃಂಗೇರಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.