ಕುದುರೆಮುಖ | ಅರಣ್ಯ ಇಲಾಖೆ ನೋಟಿಸ್‍ಗೆ ರೈತರ ಆಕ್ರೋಶ : ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ
ಕಳಸ : ಪಟ್ಟಣ ಸಮೀಪದ ಕುದುರೆಮುಖ ಆಸುಪಾಸಿನ ಕೆಲ ಕೃಷಿಕರಿಗೆ ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕುದುರೆಮುಖದಲ್ಲಿ ಗುರುವಾರ ರೈತ ಸಂಘದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಕೃಷ್ಣೇಗೌಡ, ಕನ್ನಡ ರಾಜು, ನಾಗೇಶ್ ಗೌಡ, ಶ್ರೀನಿವಾಸ್, ಜಯಂತ್‍ಗೌಡ, ಸಂಸೆ ಗ್ರಾಪಂ ಸದಸ್ಯರಾದ ಶಂಕರೇಗೌಡ, ಮಮತಾ, ಶಾಂತಾ, ಉದಯ್ ಸೇರಿದಂತೆ ಸುತ್ತಮುತ್ತಲಿನ ಕೆಂಗನಕೊಂಡ, ಕುಚಗೇರಿ, ಬಿಳಗಲ್, ಬಸರೀಕಲ್ಲು, ನೆಲ್ಲಿಬೀಡು, ಬಲಿಗೆ, ಹೊರನಾಡು, ಕಳಸ, ಕಾರಗದ್ದೆ ಪ್ರದೇಶದ ನೂರಾರು ರೈತರು ಮತ್ತು ರೈತ ಸಂಘದ ಕಾರ್ಯಕರ್ತರು ಕುದುರೆಮುಖ ಪಟ್ಟಣದಲ್ಲಿ ಜಮಾಯಿಸಿ ಅರಣ್ಯ ಇಲಾಖೆಯ ನೋಟಿಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಕುದುರೆಮುಖ ವಲಯದ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ರೈತರ ಕೃಷಿ ಭೂಮಿ ಖುಲ್ಲಾ ಮಾಡುವ ಯತ್ನವನ್ನು ಅರಣ್ಯ ಇಲಾಖೆ ಕೈಬಿಡಬೇಕು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬರುವವರೆಗೂ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದು, ರಾಷ್ಟ್ರೀಯ ಉದ್ಯಾನದೊಳಗಿನ ರೈತರ ಕೃಷಿ ಜಮೀನಿನ ಹಕ್ಕುಗಳ ಬಗ್ಗೆ ಅರಣ್ಯ ಇಲಾಖೆಯ ಜೊತೆ ಈಗಾಗಲೇ ಹಲವಾರು ಬಾರಿ ಮಾತುಕತೆ ನಡೆದಿದೆ. ಆದರೆ ಅರಣ್ಯ ಸಚಿವರ ತರಾತುರಿಯ ಹೇಳಿಕೆಯಿಂದಾಗಿ ನಮಗೆಲ್ಲ ತೆರವು ನೋಟಿಸ್ ಕೊಟ್ಟಿರುವುದು ತಪ್ಪು ಎಂದರು.
ಈ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಡಿಎಫ್‍ಓ ಶಿವರಾಮ್ ಮತ್ತು ಎಸಿಎಫ್ ಸತೀಶ್ ಬಂದಿದ್ದು, ಆಗ ಪ್ರತಿಭಟನಾಕಾರರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ನಂತರ ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಡಿಎಫ್‍ಒ ಶಿವರಾಮ್ ಸೂಕ್ತ ಕ್ರಮದ ಭರವಸೆ ನೀಡಿದರು. ಮುಖಂಡರಾದ ಸುರೇಶ್‍ಭಟ್, ರಾಮ್‍ಪ್ರಕಾಶ್, ಧರಣೇಂದ್ರ ಕೆ.ಸಿ, ಜ್ವಾಲನಯ್ಯ ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಭಾಗವಹಿಸಿದ್ದರು.