ಬಾಬಾ ಬುಡಾನ್‌ಸ್ವಾಮಿ ದರ್ಗಾದ ಗುಹೆಯೊಳಗಿನ ಗೋರಿಗಳಿಗೆ ಕುಂಕುಮ ಲೇಪನ : ಆರೋಪ
ಶಾಖಾದ್ರಿ ಕುಟುಂಬಸ್ಥರಿಂದ ಧರಣಿ : ಕಾನೂನು ಕ್ರಮಕ್ಕೆ ಆಗ್ರಹ
ಚಿಕ್ಕಮಗಳೂರು : ತಾಲೂಕಿನ ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್‌ಸ್ವಾಮಿ ದರ್ಗಾದಲ್ಲಿನ ವಿವಾದಿತ ಗುಹೆಯೊಳಗಿನ ಗೋರಿಗಳ ಮೇಲೆ ಕುಂಕುಮ ಹಚ್ಚಲಾಗುತ್ತಿದ್ದು, ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಆರೋಪಿಸಿ ಶಾಖಾದ್ರಿ ಕುಟುಂಬಸ್ಥರು ಬಾಬಾ ಬುಡಾನ್ ದರ್ಗಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‌ಸ್ವಾಮಿ ದರ್ಗಾದ ವಿವಾದಿತ ಗುಹೆಯೊಳಗಿರುವ ಗೋರಿಗಳಿಗೆ ಅರ್ಚಕರು ಕುಂಕುಮ ಹಂಚಿ ಪೂಜೆ ಮಾಡುತ್ತಿದ್ದಾರೆ. ಇದು ನ್ಯಾಯಾಲಯದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶದ ಉಲ್ಲಂಘನೆಯಾಗಿದೆ. ಅಲ್ಲದೆ ಈ ಆಚರಣೆಯಿಂದಾಗಿ ಮುಸ್ಲಿಂ ಸಮುದಾಯದವರ ಧಾರ್ಮಿಕ ಆಚರಣೆಗಳಿಗೆ ವಿರುದ್ಧವಾಗಿದೆ. ಸೆಪ್ಟಂಬರ್‌ನಲ್ಲಿ ಕುಂಕುಮ ಹಚ್ಚಿ ಪೂಜೆ ಮಾಡಲಾಗಿದ್ದು, ಇದರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಪರಿಣಾಮ ಇದೀಗ ಮತ್ತೆ ದರ್ಗಾದ ಗುಹೆಯೊಳಗಿರುವ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಮಾಡಲಾಗಿದೆ ಎಂದು ದೂರಿದರು.
ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‌ಸ್ವಾಮಿ ದರ್ಗಾದಲ್ಲಿ ವಿವಾದಿತ ಗುಹೆಯೊಳಗಿನ ಗೋರಿಗೆ ಕುಂಕುಮ ಇಟ್ಟು ಪೂಜೆ ಮಾಡಿ ನ್ಯಾಯಾಲಯದ ಯಥಾಸ್ಥಿತಿ ಆದೇಶ ಮೀರಿರುವವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ದತ್ತಮಾಲಾ ಅಭಿಯಾನದ ಬಳಿಕ ನಿತ್ಯ ಕುಂಕುಮ ಹಚ್ಚಿ ಪೂಜೆ ಮಾಡಲಾಗುತ್ತಿದೆ. ಮುಂದಿನ ತಿಂಗಳು ದತ್ತ ಜಯಂತಿ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯದ ಆದೇಶ ಮೀರಿ ಇಂತಹ ಕೃತ್ಯಗಳನ್ನು ನಡೆಸುವ ಮೂಲಕ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ ಎಂದು ಮುಖಂಡರು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮುಜರಾಯಿ ಇಒ ರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ದೂರು ಸಲ್ಲಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‌ಸ್ವಾಮಿ ದರ್ಗಾದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.