ಕಿಸಾನ್ ಸಮ್ಮಾನ್ ಯೋಜನೆ ಮರು ಜಾರಿ ಮಾಡಿ: ಬಿ.ಎಸ್.ಯಡಿಯೂರಪ್ಪ ಆಗ್ರಹ
ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರಾ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಅವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಸುತ್ತೂರು ರಥೋತ್ಸವಕ್ಕೆ 11 ಗಂಟೆಗೆ ಸರಿಯಾಗಿ ಮಾಜಿ ಸಿ ಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ಕೊಟ್ಟರು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಜೈಕಾರದೊಂದಿಗೆ ರಥವ ಎಳೆದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಥೋತ್ಸವಕ್ಕೆ ಚಾಲನೆ ಕೊಟ್ಟ ಬಳಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಬಲಭಾಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸುತ್ತೂರು ಶ್ರೀಗಳು, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಮಾಧುಸ್ವಾಮಿ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್ ಎಂದು ಭಾಷಣ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ, ಪ್ರತಿವರ್ಷ ಹೊಸತನದೊಂದಿಗೆ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಬಂದಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲು ನನಗೆ ಬಹಳ ಸಂತೋಷ ಆಗುತ್ತೆ. ಇದು ಕೇವಲ ಒಂದು ಧಾರ್ಮಿಕ ಉತ್ಸವ ಅಲ್ಲ. ಜನ ಸಾಮಾನ್ಯರಿಗೆ ಅನುಕೂಲವಾಗುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬಹುದು. ಸಹಸ್ರಾರು ವರ್ಷಗಳಿಂದ ಪರಕೀಯರ ದಾಳಿಗೆ ಎದೆಕೊಟ್ಟು ಎದುರಿಸಿ ಮತ್ತೆ ತಲೆ ಎತ್ತಿ ನಿಂತಿರುವ ನಮ್ಮ ಸನಾತನ ಧರ್ಮ ಸಂಸ್ಕೃತಿಯನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲದ ವಾತಾವರಣ ಇದೆ. ಕುಡಿಯುವ ನೀರಿನ ಹಾಹಾಕಾರ ಬರುವ ಸಂಭವ ಇದೆ. ಬರಗಾಲ ಕಾಡುವ ಸಂದರ್ಭದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ರೈತರು ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು ಬಡ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗುವ ಯೋಜನೆ ಜಾರಿ ಮಾಡಿದ್ದೆ. ಕಿಸಾನ್ ಸಮ್ಮಾನ್ ಯೋನೆಯಡಿ ರೈತರಿಗೆ ಕೊಡುತ್ತಿದ್ದ ಹಣ ಈಗಿನ ಸರ್ಕಾರ ನಿಲ್ಲಿಸಿರುವುದು ಖಂಡನೀಯ. ಈ ಕೂಡಲೇ ಈ ಯೋಜನೆ ಮರು ಜಾರಿ ಮಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.
ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಜಗತ್ತಿನಾದ್ಯಂತ ಹಿಂದೂ ಧರ್ಮ ಎಲ್ಲರ ಆಶಾಕಿರಣವಾಗುತ್ತಿದೆ. ಸುತ್ತೂರು ಶ್ರೀಗಳು ದೇಶದ ಉದ್ದಗಲಕ್ಕೂ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಮಠ ಮಾನ್ಯಗಳು ಗ್ರಾಮೀಣ ಭಾಗದ ಜನರಿಗೆ ನೀಡುತ್ತಿರುವ ಶಿಕ್ಷಣ, ಅನ್ನ,ಆರೋಗ್ಯ ನೀಡುತ್ತ ಸರ್ಕಾರದ ಮೇಲಿನ ಜವಾಬ್ದಾರಿಯನ್ನ ಕಡಿಮೆ ಮಾಡುತ್ತಿವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಠ ಮಾನ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದೆ. ಪ್ರಧಾನಿ ಮೋದಿ ಅವರು ಒಂದು ಮಹತ್ತರ ನಿರ್ಧಾರ ಮಾಡಿದ್ದಾರೆ. 1 ಕೆ.ಜಿ ಅಕ್ಕಿಗೆ 29 ರೂ ನಂತೆ ಜನ ಸಾಮಾನ್ಯರಿಗೆ ನೀಡಲು ಮುಂದಾಗಿದ್ದಾರೆ. ಇಂದು 1ಕೆಜಿ ಅಕ್ಕಿಗೆ 50 ರಿಂದ 60 ರೂ ಆಗಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಭಾರತ್ ರೈಸ್ ಎಂಬ ಬ್ರಾಂಡ್ ಅಡಿ ನೀಡಲು ನಿರ್ಧಾರ ಮಾಡಿದ್ದಾರೆ ಇದು ಒಳ್ಳೆಯ ಯೋಜನೆ. ಈ ಮೂಲಕ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.