ಬಗ್ಗಸಗೋಡು ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಾಲಾ ಮಕ್ಕಳಿಂದ ಪ್ರತಿಭಟನೆ
ಚಿಕ್ಕಮಗಳೂರು: ಶಾಲಾ ಶಿಕ್ಷಕರ ನೇಮಕಕ್ಕೆ ನಿರ್ಲಕ್ಷ್ಯಕ್ಕೆ ಖಂಡಿಸಿ ಹಾಗೂ ಕೂಡಲೇ ಶಿಕ್ಷಕರ ನೇಮಕ ಮಾಡಬೇಕೆಂದು ಆಗ್ರಹಿಸಿ ಸೋಮವಾರ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆ ಆವರಣದಲ್ಲೇ ಧರಣಿ ಧರಣಿ ನಡೆಸಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಿಕ್ಷಕರ ಕೊರತೆ ನೀಗಿಸದ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶಗೊಂಡ ಮಕ್ಕಳ ಪೋಷಕರು ತಮ್ಮ ಮಕ್ಕಳೊಂದಿಗೆ ಸೋಮವಾರ ಬೆಳಗ್ಗೆ ದಿಢೀರ್ ಧರಣಿ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮಕ್ಕಳ ಪೋಷಕರು, ಬಗ್ಗಸಗೋಡು ಶಾಲೆಯಲ್ಲಿ 1-7ನೇ ತರಗತಿವರೆಗೆ 77 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಆದರೆ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. 1-7ನೇ ತರಗತಿವರೆಗಿನ ಮಕ್ಕಳಿಗೆ ಇಬ್ಬರೆ ಶಿಕ್ಷಕರು ಪಾಠ ಮಾಡಲು ಸಾಧ್ಯವಾಗದೇ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿಯುವಂತಾಗಿದೆ. ಪಾಠದೊಂದಿಗೆ ಶಿಕ್ಷಕರು ಬೇರೆ ಕೆಲಸವನ್ನೂ ಮಾಡಬೇಕಾಗಿರುವುದರಿಂದ ಸಕಾಲದಲ್ಲಿ ತರಗತಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಯಲ್ಲಿನ ಶಿಕ್ಷಕರ ಕೊರತೆ ಸಮಸ್ಯೆ ಕಳೆದೊಂದು ವರ್ಷದಿಂದ ಇದ್ದರೂ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅನೇಕ ಬಾರಿ ಮನವಿ ಸಲ್ಲಿಸದರೂ ಶಿಕ್ಷಕರ ನೇಮಕ ಆಗಿಲ್ಲ. ಈ ಶಾಲೆಯಲ್ಲಿ ಬಡ, ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದು, ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಸರಕಾರವೇ ತಾರತಮ್ಯ ಮಾಡುತ್ತಿದೆ. ಪರಿಣಾಮ ಸರಕಾರಿ ಶಾಲೆಗಳತ್ತ ಮಕ್ಕಳು ಬಾರದೇ ಖಾಸಗಿ ಶಾಲೆಯತ್ತ ಹೋಗುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಶಾಲೆಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಶಿಕ್ಷಣ ಇಲಾಖೆ ಅಧಿಕಾರಿಗೆ ಶಾಲಾ ಮಕ್ಕಳು ಮನವಿ ಸಲ್ಲಿಸಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.