ತರೀಕೆರೆ: ದಲಿತ ಮುಖಂಡರು, ಅಧಿಕಾರಿಗಳ ಸಮ್ಮುಖದಲ್ಲಿ ಗೊಲ್ಲರಹಟ್ಟಿ ದೇಗುಲ ಪ್ರವೇಶಿಸಿದ ದಲಿತರು
ಚಿಕ್ಕಮಗಳೂರು: ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ದಲಿತ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣ ಮಂಗಳವಾರ ತಿರುವು ಪಡೆದಿದ್ದು, ದಲಿತರು ಗ್ರಾಮ ಪ್ರವೇಶಿಸದರೇ ಗ್ರಾಮ ಹಾಗೂ ದೇವಾಲಯ ಮೈಲಿಗೆಯಾಗುತ್ತಿದೆ ಎಂಬ ಕಾರಣಕ್ಕೆ ದಲಿತರ ಗ್ರಾಮ ಪ್ರವೇಶವನ್ನೇ ನಿಷೇಧಿಸಿದ್ದ ಗ್ರಾಮಕ್ಕೆ ರಾಜ್ಯದ ಪ್ರಮುಖ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಂದಾಯ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ಗ್ರಾಮ ಪ್ರವೇಶಿಸಿದ್ದಲ್ಲದೇ ಗ್ರಾಮದಲ್ಲಿದ್ದ ಕಂಬದ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಪ್ರವೇಶಿಸುವ ಮೂಲಕ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು.
ಮಂಗಳವಾರ ಸಂಜೆ ವೇಳೆ ರಾಜ್ಯ ದಲಿತ ಸ್ವಾಭಿಮಾನಿ ಒಕ್ಕೂಟದ ಮುಖಂಡರಾದ ಪ್ರೊ.ಹರಿರಾಮ್, ಭಾಸ್ಕರ್ ಪ್ರಸಾದ್, ಡಾ.ಕೋದಂಡರಾಮ್, ಶಂಕರ್ ರಾಮ್, ಲಿಂಗಯ್ಯ, ಕೆ.ಸಿ.ನಾಗರಾಜ್, ಚಳುವಳಿ ಕೆ.ಅಣ್ಣಯ್ಯ, ರಮೇಶ್, ಅರುಣ್, ಕರ್ಣನ್, ಡಾ. ಶಿವಪ್ರಸಾದ್, ಚಂದ್ರಪ್ಪ, ಸುನೀಲ್, ಓಂಕಾರಪ್ಪ, ರಘು ಸೇರಿದಂತೆ ತರೀಕೆರೆ ತಾಲೂಕು ಮುಖಂಡರು ಹಾಗೂ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕಾಂತರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ವಿ.ಎಸ್.ರಾಜೀವ್, ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರೊಂದಿಗೆ ಗೊಲ್ಲರಹಟ್ಟಿ ಗ್ರಾಮಕ್ಕೆ ತೆರಳಿದರು.
ಈ ವೇಳೆ ಗ್ರಾಮದಲ್ಲಿದ್ದ ದೇಗುಲಕ್ಕೆ ಬೀಗ ಹಾಕಿದ್ದು ಕಂಡು ಬಂತು. ಅಧಿಕಾರಿಗಳು ಬೀಗ ತೆರೆಯುವಂತೆ ಗ್ರಾಮದ ಹಿರಿಯ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮುಖಂಡರು, ದೇವಸ್ಥಾನದ ಅರ್ಚಕ ಪರಿಶಿಷ್ಟ ಜಾತಿ ಯುವಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಆತ ತಲೆಮರೆಸಿ ಕೊಂಡಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಬೀಗ ನಮ್ಮ ಬಳಿ ಇಲ್ಲ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ತಹಶೀಲ್ದಾರ್ ರಾಜೀವ್, ಬೀಗ ತೆರೆಯುವವರನನು ಕರೆಸಿ ದೇವಸ್ಥಾನದ ಬೀಗ ಒಡೆದು ದೇಗುವ ಪ್ರವೇಶಿಸಿದರು. ದೇಗುಲದ ಗರ್ಭಗುಡಿಯ ಬಾಗಿಲಿಗೂ ಬೀಗ ಹಾಕಿದ್ದರಿಂದ ಅಧಿಕಾರಿಗಳು ಅದನ್ನೂ ಒಡೆದು ಬಾಗಿಲು ತೆರೆದರು. ಈ ವೇಳೆ ರಾಜ್ಯ ಮಟ್ಟದ ದಲಿತ ಮುಖಂಡರ ನೇತೃತ್ವದಲ್ಲಿ ಗ್ರಾಮ ಪ್ರವೇಶಿಸಿದ್ದ ಮಾದಿ ಸಮುದಾಯದ ನೂರಾರು ಜನರು ಅಧಿಕಾರಿಗಳೊಂದಿಗೆ ದೇಗುವ ಪ್ರವೇಶಿಸಿದ ದೇವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ ಮಾರುತಿ ಕೂಡ ದೇಗುಲ ಪ್ರವೇಶಿಸಿದ್ದರು.
ದಲಿತ ಮುಖಂಡರು ಗ್ರಾಮ ಮತ್ತು ದೇವಸ್ಥಾನ ಪ್ರವೇಶ ಮಾಡುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದಲಿತರು ದೇಗುಲ ಪ್ರವೇಶಿಸಿದ ಬಳಿಕ ಒಕ್ಕೂಟದ ಮುಖಂಡ ಭಾಸ್ಕರ್ ಪ್ರಸಾದ್ ದೇವಾಲಯದ ಎದುರು ನೆರೆದಿದ್ದ ದಲಿತ ಸಮುದಾಯದವರಿಗೆ ಸಂವಿಧಾನದ ಪ್ರಸ್ತಾವನೆಯನ್ನು ಭೋಧಿಸಿದರು.
ದಲಿತರು ದೇವಾಲಯ ಪ್ರವೇಶದ ಸಂದರ್ಭದಲ್ಲಿ ಗ್ರಾಮದಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಕೆಲ ಗ್ರಾಮಸ್ಥರು ತಮ್ಮ ಮನೆಯ ಬಾಗಿಲು, ಕಿಟಕಿಗಳ ಬಳಿ ನಿಂತು ಘಟನೆಯನ್ನು ವೀಕ್ಷಿಸಿದರು. ದಲಿತರು ದೇಗುಲ ಪ್ರವೇಶ ಸಂದರ್ಭದಲ್ಲಿ ಗ್ರಾಮಸ್ಥರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
ತರೀಕೆರೆ ತಾಲೂಕು ಕಚೇರಿಯಲ್ಲಿ ಮುಖಂಡರು ಮತ್ತು ಅಧಿಕಾರಿಗಳ ಸಭೆ: ತರೀಕೆರೆ ತಾಲೂಕಿನ ಗೇರುಮರಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜೆಸಿಬಿ ಚಾಲಕ ಮಾರುತಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಪ್ರಕರಣ ಹಾಗೂ ಗ್ರಾಮಕ್ಕೆ ಪರಿಶಿಷ್ಟರ ಪ್ರವೇಶದಿಂದ ದೇವರಿಗೆ ಮೈಲಿಗೆಯಾಗಿದೆ ಎಂದು ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬೀಗಿ ಹಾಕಿದ್ದ ಪ್ರಕರಣ ಸಂಬಂಧ ಮಂಗಳವಾರ ತರೀಕೆರೆ ಪಟ್ಟಣಕ್ಕೆ ಆಗಮಿಸಿದ ದಲಿತ ಸ್ವಾಭಿಮಾನಿ ಒಕ್ಕೂಟದ ಮುಖಂಡರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಧರಣಿ ನಡೆಸಿದರು. ನಂತರ ತಾಲೂಕು ಕಚೇರಿಗೆ ಎದುರು ಪ್ರಕರಣದ ಆರೋಪಿಗಳನ್ನು 9 ದಿನ ಕಳೆದರೂ ಬಂಧಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತರೀಕೆರೆ ಕಂದಾಯ ಉಪ ವಿಭಾಗದ ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಹಾಗೂ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಎಸಿ, ತಹಶೀಲ್ದಾರ್, ಎಎಸ್ಪಿ, ಡಿವೈಎಸ್ಪಿ ಅವರೊಂದಿಗೆ ಸಭೆ ನಡೆಸಿದ ಮುಖಂಡರು, 9 ದಿನ ಕಳೆದರೂ ಆರೋಪಿಗಳನ್ನು ಬಂಧಿಸದಿರುವುದು, ಸಂತ್ರಸ್ಥನಿಗೆ ಪರಿಹಾರ ನೀಡದಿರುವುದು, ಆರೋಪಿಗಳ ಪೈಕಿ ನಾಲ್ವರನ್ನು ಠಾಣೆ ಕರೆಸಿ ನಂತರ ಬಿಟ್ಟು ಕಳುಹಿಸಿರುವುದನ್ನು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ಪಡೆದರು. ಪ್ರಕರಣದ ಇಬ್ಬರು ಆರೋಪಿಗಳು ತರೀಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ದಲಿತರಿಗೆ ಗ್ರಾಮ ಪ್ರವೇಶ ನಿಷೇಧ ಮಾಡಿರುವುದು ನಮ್ಮ ಸಂಪ್ರದಾಯ, ಹಿಂದಿನಿಂದಲೂ ಈ ಪದ್ಧತಿ ಇದೆ ಎಂದು ಹೇಳಿಕೆ ನೀಡುವ ಮೂಲಕ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಏಕೆ? ಎಂದು ಹರಿಹಾಯ್ದರು.
ಈ ವೇಳೆ ಉಪವಿಭಾಗಾಧಿಕಾರಿ, ಡಿವೈಎಸ್ಪಿ, ತಹಶೀಲ್ದಾರ್ ಅವರು ಸಮಾಜಾಯಿಸಿ ನೀಡಲು ಮುಂದಾದರು. ಇದರಿಂದ ಮತ್ತಷ್ಟು ಕುಪಿತರಾದ ಮುಖಂಡರು, ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಾಗಿದ್ದರೂ ಆರೋಪಿಗಳನ್ನೂ ಬಂಧಿಸಲು ವಿಫಲರಾಗಿರುವ ಹಾಗೂ ಅಸ್ಪೃಶ್ಯತೆ ನಡೆದಿದ್ದರೂ ಯಾವುದೇ ಕ್ರಮಕೈಗೊಳ್ಳದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿರುದ್ಧವೂ ದೂರು ದಾಖಲಿಸಬೇಕು. ಈ ಸಂಬಂಧ ನಿರ್ಣಯ ಕೈಗೊಂಡು ಸರಕಾರಕ್ಕೆ ವರದಿ ಸಲ್ಲಿಸಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಗೊಲ್ಲರಹಟ್ಟಿ ಗ್ರಾಮದಲ್ಲಿರುವ ದೇಗುಲದ ಬೀಗ ತೆಗೆದು ದಲಿತರ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳ ಸಮ್ಮತಿಸಿದ್ದರಿಂದ ಮಂಗಳವಾರ ಸಂಜೆ ವೇಳೆಗೆ ಸಂತ್ರಸ್ಥ ಯುವಕ ಮಾರುತಿಯೊಂದಿಗೆ ಗ್ರಾಮಕ್ಕೆ ತೆರಳಿದ ಮುಖಂಡರು, ನೂರಾರು ದಲಿತರು ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲ ಪ್ರವೇಶಿಸಿದರು.
ಪ್ರಕರಣದ ಆರೋಪಿಗಳನ್ನು ಒಂದು ವಾರದೊಳಗೆ ಬಂದಿಸಬೇಕೆಂದು ಗಡುವು ನೀಡಿದ್ದೇವೆ. ಪೊಲೀಸರು ಬಂದಿಸುವ ಭರವಸೆ ನೀಡಿದ್ದಾರೆ. ವಾರದೊಳಗೆ ಬಂದಿಸದಿದ್ದಲ್ಲಿ ತರೀಕೆರೆ ಚಲೋ ಚಳವಳಿಗೆ ಕರೆ ನೀಡಲಾಗುವುದು. ರಾಜ್ಯದ ಮೂಲೆ ಮೂಲೆಗಳಿಂದ ಹೋರಾಟಗಾರರನ್ನು ತರೀಕೆರೆ ಪಟ್ಟಣಕ್ಕೆ ಬರಲಿದ್ದು, ಆಗ ಉಗ್ರ ಹೋರಾಟ ನಡೆಸಲಾಗುವುದು. ಸದ್ಯ ಅಧಿಕಾರಿಗಳು ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾನೂನು ಪಾಲಿಸಿದ್ದರೇ ಇಲ್ಲಿಗೆ ನಾವು ಬರುವ ಅಗತ್ಯವಿರಲಿಲ್ಲ. ಆದರೆ ಕೆಲ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು. ಈ ಹೋರಾಟ ಇಲ್ಲಿಗೆ ನಿಲ್ಲಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಅನೇಕ ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದಕ್ಕೆ ಅಧಿಕಾರಿಗಳು ಕೊನೆ ಹಾಡಬೇಕು. ತಪ್ಪಿದಲ್ಲಿ ನಾವು ಹೋರಾಟದ ಮೂಲಕ ನಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತೇವೆ.
ಭಾಸ್ಕರ್ ಪ್ರಸಾದ್
ಗೊಲ್ಲರಹಟ್ಟಿಯಲ್ಲಿ ದಲಿತರಿಗೆ ಪ್ರವೇಶ ನಿಷೇಧ ಹಾಗೂ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಜಾತಿ ನಿಂಧನೆ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ದಲಿತರ ಮೇಲೆ ದೌರ್ಜನ್ಯ ನಡೆದಿದ್ದರೂ ಅಧಿಕಾರಿಗಳು ಶಾಂತಿ ಸಭೆ ಮಾಡಿ ಅಸ್ಪೃಶ್ಯತೆ ಆಚರಣೆಯನ್ನು ಇನ್ನೂ ಹೆಚ್ಚಾಗುವಂತೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ಪಾಲನೆ ಮಾಡಿಲ್ಲ. ಈ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಈ ಸಂಬಂಧ ಎಸ್ಪಿ, ಡಿಸಿಯೊಂದಿಗೆ ಚರ್ಚಿಸಲಾಗುವುದು. ಈ ಘಟನೆ ಮಾಧ್ಯಮಗಳ ಮೂಲಕ ರಾಜ್ಯದ ಗಮನಸೆಳೆದಿದ್ದರೂ ಸಿಎಂ ಹಾಗೂ ಗೃಹ ಸಚಿವರು ಒಂದೇ ಒಂದು ಹೇಳಿಕೆ ನೀಡದಿರುವುದು ನಾಚಿಕೆಗೇಡು. ಅಂಬೇಡ್ಕರ್ ಸಂವಿಧಾನದ ಕಾನೂನಿನಂತೆ ಇಂದು ದಲಿತರಿಗೆ ದೇಗುವ ಪ್ರವೇಶಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಭವಿಷ್ಯದಲ್ಲಿ ಎಲ್ಲ ಸಮುದಾಯಗಳ ಜನರು ಐಕ್ಯತೆಯಿಂದ ಇರಬೇಕೆಂಬುದು ನಮ್ಮ ಉದ್ದೇಶ
ಪ್ರೊ.ಹರಿರಾಮ್