ತರೀಕೆರೆ: ಪ್ರವಾಸಕ್ಕೆ ಬಂದಿದ್ದ ಛತ್ತೀಸ್‌ಗಡ ಮೂಲಕ ಟೆಕ್ಕಿ ನೀರಿನಲ್ಲಿ ಮುಳುಗಿ ಮೃತ್ಯು
ಚಿಕ್ಕಮಗಳೂರು: ಸ್ನೇಹಿತನೊಂದಿಗೆ ಪ್ರವಾಸಕ್ಕೆ ಬಂದಿದ್ದ ಛತ್ತೀಸ್‌ಗಡ ಮೂಲದ ಬೆಂಗಳೂರಿನ ಟೆಕ್ಕಿಯೊಬ್ಬರು ಈಜಲು ತರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕು ಕೆಮ್ಮಣ್ಣಗುಂಡಿ ಸಮೀಪದ ಹೆಬ್ಬೆ ಜಲಪಾತದ ಬಳಿ ನಡೆದಿದೆ.
ಅಮಿತ್‍ಕುಮಾರ್ (30) ಮೃತ ಯುವಕ ಎಂದು ಗುರುತಿಸಲಾಗಿದೆ. ಅಮಿತ್ ಕುಮಾರ್ ಮೂಲತಃ ಛತ್ತೀಸ್‌ಗಡದ ಯುವಕನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ನಾಲ್ಕು ದಿನಗಳ ರಜೆಯ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಸ್ನೇಹಿತನೊಂದಿಗೆ ಆಗಮಿಸಿದ್ದರು.
ಜಿಲ್ಲೆಯ ಇತರೆಡೆಗಳಲ್ಲಿರುವ ಪ್ರವಾಸಿತಾಣಗಳನ್ನು ವೀಕ್ಷಿಸಿ ರವಿವಾರ ಸಂಜೆ ಹೆಬ್ಬೆ ಜಲಪಾತ ವೀಕ್ಷಣೆಗೆ ಬಂದಿದ್ದ ವೇಳೆ ಎತ್ತರದಿಂದ ಧಮ್ಮಿಕ್ಕುವ ಜಲಪಾತದ ನೀರಿನಲ್ಲಿ ಜತೆಗೆ ಬಂದಿದ್ದ ಸ್ನೇಹಿತನೊಂದಿಗೆ ಈಜಲು ತೆರಳಿದಾಗ ಘಟನೆ ಸಂಭವಿಸಿದೆ. ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಸೂಚನೆ ನೀಡಿದರೂ ನೀರಿಗೆ ಇಳಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈಜಲು ನೀರಿಗೆ ಇಳಿದು ಅಸ್ವಸ್ಥಗೊಂಡ ಅಮಿತ್ ಅವರ ಸ್ನೇಹಿತ ಲಾಲ್ ಕರೀಂ ಅವರನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಲಿಂಗ ದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.