ಭಾರತೀಯರ ಘನತೆಯ ಬದುಕಿಗೆ ಡಾ. ಅಂಬೇಡ್ಕರ್ ರವರ ಕೊಡುಗೆ ಅನನ್ಯ: ಸುಧೀರ್ ಕುಮಾರ್ ಮುರೊಳ್ಳಿ
ಕೊಪ್ಪ: ಭಾರತದ ಸಂವಿಧಾನ ವಿಶ್ವದ ಅತಿ ಶ್ರೇಷ್ಠ ಹಾಗು ಅತಿ ದೊಡ್ಡ ಸಂವಿಧಾನವಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗು ಇನ್ನಿತರ ತಾರತಮ್ಯವನ್ನು ಹೋಗಲಾಡಿಸಲು, ಶೋಷಣೆ ಮುಕ್ತ ಸಾಮಾಜಿಕ ಸಮಾನತೆಯ ಬದುಕಿಗೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆ ಅನನ್ಯ ವಾದುದು, ಅದು ನಮ್ಮ ದೇಶದ ಘನತೆ ಯನ್ನು ಹೆಚ್ಚಿಸುವ ಜೊತೆಗೆ ಪ್ರತಿ ಭಾರತೀಯನ ಘನತೆಯನ್ನು ಸಹ ಹೆಚ್ಚಿಸಿದೆ ಎಂದು ಖ್ಯಾತ ನ್ಯಾಯವಾದಿ, ನೋಟರಿ ಹಾಗು ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವೇದಿಕೆ ಹಾಗೂ ಸಾರಿಗೆ ಇಲಾಖೆ ಚಿಕ್ಕಮಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಸಂವಿದಾನ ದಿನಾಚರಣೆ, ವಾಯು ಮಾಲಿನ್ಯ ಸಪ್ತಾಹ ಹಾಗು ರಸ್ತೆ ಸುರಕ್ಷತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ ಅವರು ವಾಹನಗಳನ್ನು ಇತಿ ಮಿತಿಯಾಗಿ ಬಳಸಬೇಕು, ಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡು ವಾಹನಗಳನ್ನು ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಾರಿಗೆ ಇಲಾಖೆಯ ಅಧಿಕಾರಿಗಳಾದ ರಮ್ಯಾ, ಸಂತೋಷ್, ಡ್ರೈವಿಂಗ್ ಶಾಲೆಯ ನುಗ್ಗಿ ಮಂಜುನಾಥ್, ಝಹೀರ್ ಅಬ್ಬಾಸ್, ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ, ಕಾಲೇಜು ಅಭಿವೃದ್ಧಿ ಸದಸ್ಯರಾದ ವಿಜಯ್ ತೇಜ್, ಝುಬೈರ್ ಅಹ್ಮದ್, ದುರ್ಗಾ ಚರಣ್, ರೈತ ಮುಖಂಡ ನವೀನ್ ಕರಾವನೆ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಥಮ ರ‍್ಯಾಂಕ್ ವಿದ್ಯಾರ್ಥಿನಿ ಸ್ಪಂದನಾ ಅವರನ್ನು ಸಾರಿಗೆ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ. ಎಸ್ ಅನಂತ್ ಸಭೆಯ ಅಧ್ಯಕ್ಷತೆ ವಹಿಸಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.