ಶರಣಾದ ನಕ್ಸಲರನ್ನು ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಕರೆ ತಂದ ಪೊಲೀಸರು
![ಶರಣಾದ ನಕ್ಸಲರನ್ನು ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಕರೆ ತಂದ ಪೊಲೀಸರು ಶರಣಾದ ನಕ್ಸಲರನ್ನು ವಿಚಾರಣೆಗಾಗಿ ಚಿಕ್ಕಮಗಳೂರಿಗೆ ಕರೆ ತಂದ ಪೊಲೀಸರು](https://www.varthabharati.in/h-upload/2025/01/17/1316032-untitled-20.webp)
ಚಿಕ್ಕಮಗಳೂರು : ರಾಜ್ಯ ಸರಕಾರದ ಮುಂದೆ ಇತ್ತೀಚೆಗೆ ಶರಣಾಗಿರುವ, ಸದ್ಯ ಎನ್ಐಎ ವಶದಲ್ಲಿರುವ ಆರು ಮಂದಿ ನಕ್ಸಲರನ್ನು ಜಿಲ್ಲಾ ಪೊಲೀಸರು ವಿಚಾರಣೆ ಮತ್ತು ಸ್ಥಳ ಮಹಜರಿಗೆ ಜಿಲ್ಲೆಗೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.
ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಸುಂದರಿ, ರಾಯಚೂರು ಜಿಲ್ಲೆಯ ಮಾರಪ್ಪ ಅರೋಲಿ, ತಮಿಳುನಾಡಿನ ಕೆ.ವಸಂತ, ಕೇರಳದ ಜೀಶಾ ಅವರನ್ನು ಗುರುವಾರ ರಾತ್ರಿಯೇ ಚಿಕ್ಕಮಗಳೂರಿಗೆ ಕರೆ ತರಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ನಗರದ ಗೋಪ್ಯ ಸ್ಥಳದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿ ಶನಿವಾರ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ವಿಚಾರಣಾಧಿಕಾರಿಯಾಗಿರುವ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಈಗಾಗಲೇ ಆರು ಜನರ ಮೇಲೆ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಆರಂಭವಾಗಿದ್ದು, ಶನಿವಾರ ನಕ್ಸಲರ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಕೊಪ್ಪ ತಾಲೂಕಿನ ಮೇಗೂರು ಸಮೀಪದ ಕಿತ್ತಲಗಂಡಿಗೆ ಕೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ ಎನ್ನಲಾಗುತ್ತಿದೆ.