ಚಿಕ್ಕಮಗಳೂರು| ಚನ್ನಗೊಂಡನಹಳ್ಳಿಯಲ್ಲಿ ಹುಲಿ ಪ್ರತ್ಯಕ್ಷ; ಆತಂಕದಲ್ಲಿ ಗ್ರಾಮಸ್ಥರು
ಚಿಕ್ಕಮಗಳೂರು: ತಾಲೂಕಿನ ಹಿರೇಕೊಳಲೆ ಸಮೀಪದ ಚನ್ನಗೊಂಡನಹಳ್ಳಿಯ ಬಾಗುಮನೆ ಎಸ್ಟೇಟ್‍ಗೆ ಹೋಗುವ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಹುಲಿಯನ್ನು ಕಂಡ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕಾಫಿತೋಟಕ್ಕೆ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಮುಂಜಾನೆ ಹಿರೇಕೊಳಲೆ ಚನ್ನಗೊಂಡನಹಳ್ಳಿಯಿಂದ ಬಾಗುಮನೆ ಕಾಫಿ ಎಸ್ಟೇಟ್‍ಗೆ ರಸ್ತೆ ಬದಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ ಹುಲಿಯನ್ನು ಕಂಡು ಹೆದರಿಕೊಂಡಿದ್ದು, ಟ್ರ್ಯಾಕ್ಟರ್ ಅನ್ನು ಸ್ಥಳದಲ್ಲೇ ನಿಲ್ಲಿಸಿ ಹಿಂದೆಯೇ ಬಂದ ಕಾರೊಂದರಲ್ಲಿ ಹೋಗಿದ್ದಾನೆ. ಅದೇ ವೇಳೆಗೆ ಮುಂಭಾಗದಿಂದ ಜೀಪ್‍ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಹುಲಿಯ ಚಿತ್ರವನ್ನು ಸೆರೆ ಹಿಡಿದುಕೊಂಡಿದ್ದಾರೆ.
ಹುಲಿಯ ಓಡಾಟವನ್ನು ಪ್ರತ್ಯಕ್ಷವಾಗಿ ಕಂಡಿರುವ ಇಲ್ಲಿನ ಗ್ರಾಮಸ್ಥರು ಮತ್ತು ತೋಟ ಕಾರ್ಮಿಕರು ಭಯಬೀತರಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒತ್ತಾಯಿಸಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಾಡಾನೆಗಳ ಸಂಚಾರದಿಂದ ಜನರು ಭಯಬೀತರಾಗಿದ್ದಾರೆ. ಕಾಡಾನೆಗಳು ಈಗಾಗಲೇ ಅನೇಕರನ್ನು ಬಲಿ ಪಡೆದುಕೊಂಡಿವೆ. ಸದ್ಯ ಬಾಗುಮನೆ ಎಸ್ಟೇಟ್ ಸಮೀಪದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಜನರ ನಿದ್ದೆಗೆಡಿಸಿದೆ. ಕಾಡಾನೆ ಕಾಟವನ್ನು ಒಂದು ಹಂತಕ್ಕೆ ತಹಬಂಧಿಗೆ ತಂದಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಹುಲಿ ಸಂಚಾರ ತಲೆನೋವು ತಂದಿದೆ.