ಕೇಂದ್ರ ಸಚಿವ ವಿ.ಸೋಮಣ್ಣ ಕಚೇರಿ ಕಟ್ಟಡ ಹಿಂಪಡೆದ ಸರಕಾರ
ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಎನ್‍ಡಿಎ ಶಾಸಕರ ತೀವ್ರ ಆಕ್ರೋಶ
ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನಗರದ ರೈಲ್ವೆ ನಿಲ್ದಾಣ ಎದುರಿನ ಪರಿವೀಕ್ಷಣಾ ಕಟ್ಟಡವನ್ನು ನೀಡಿ,ಅನುಮೋದನೆ ಮಾಡಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಈಗ ಅನುಮೋದನೆಯನ್ನು ಹಿಂಪಡೆದಿರುವ ಕ್ರಮವನ್ನು ಜಿಲ್ಲೆಯ ಎನ್.ಡಿ.ಎ ಮೈತ್ರಿ ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎನ್.ಡಿ.ಎ ಮೈತ್ರಿಕೂಟದ ಶಾಸಕರಾದ ಜಿ.ಬಿ.ಜೋತಿಗಣೇಶ್, ಬಿ.ಸುರೇಶಗೌಡ, ಸಿ.ಬಿ.ಸುರೇಶಬಾಬು ಅವರು, ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ಅಲ್ಲದೆ, ಯಾವುದೇ ಕಾರಣಕ್ಕೂ ಸಚಿವ ವಿ.ಸೋಮಣ್ಣ ಅವರ ಕಚೇರಿಗೆ ನೀಡಿರುವ ಕಟ್ಟಡವನ್ನು ವಾಪಸ್ ನೀಡುವುದಿಲ್ಲ ಎಂದು ಹೇಳಿದರು.
ತುಮಕೂರು ನಗರ ಕ್ಷೇತ್ರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಗರದ ಪರಿವೀಕ್ಷಣಾ ಕಟ್ಟಡವನ್ನು ದುರಸ್ತಿಗೊಳಿಸಿ ತುಮಕೂರು ಲೋಕಸಭಾ ಸದಸ್ಯರೂ ಆದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿ ಆರಂಭಿಸಲು ಅನುಮತಿ ನೀಡಿ ರಾಜ್ಯ ಸರಕಾರ ಈ ತಿಂಗಳ 3ರಂದು ಅನುಮೋದನೆ ನೀಡಿತ್ತು. ಅಂದಿನಿಂದಲೇ ಸಚಿವರ ಕಚೇರಿ ಕೆಲಸಕಾರ್ಯಗಳು ಇಲ್ಲಿ ಪ್ರಾರಂಭವಾಗಿವೆ.ಆದರೆ, ಇಂದು ಶುಕ್ರವಾರ ರಾಜ್ಯ ಸರಕಾರ ಸಚಿವರ ಕಚೇರಿಗೆ ನೀಡಿದ್ದ ಕಟ್ಟಡದ ಅನುಮೋದನೆಯನ್ನು ಹಿಂಪಡೆದಿರುವುದು ಖಂಡನೀಯ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರ ಶಾಸಕ ಸಿ.ಬಿ.ಸುರೇಶ್‍ಬಾಬು ಮಾತನಾಡಿ, ಕೇಂದ್ರ ಸಚಿವರ ಕಚೇರಿಗೆಂದು ಕೊಟ್ಟ ಕಟ್ಟಡವನ್ನು ವಾಪಸ್ ಪಡೆಯಲು ರಾಜ್ಯ ಸರಕಾರ ಹೊರಟಿದೆ. ಒಮ್ಮೆ ಕೊಟ್ಟು ಮತ್ತೆ ವಾಪಸ್ ಪಡೆಯುವುದನ್ನು ಕಾಂಗ್ರೆಸ್ ಸರಕಾರ ದಂಧೆ ಮಾಡಿಕೊಂಡಂತಿದೆ ಎಂದು ಟೀಕಿಸಿದರು.
ತಮಮಕೂರು ಗ್ರಾಮಾಂತರ ಶಾಸಕ ಸುರೇಶ್‍ಗೌಡ ಮಾತನಾಡಿ, ಕೇಂದ್ರ ಸಚಿವ ವಿ.ಸೋಮಣ್ಣನವರ ಅಭಿವೃದ್ಧಿ ಕಾರ್ಯ, ಅವರ ಜನಪರ ಕೆಲಸಗಳ ವೇಗಕ್ಕೆ ಕಾಂಗ್ರೆಸ್ ನಾಯಕರಿಗೆ ನಡುಕು ಉಂಟಾಗಿದೆ. ಸೋಮಣ್ಣನವರ ವೇಗ ತಡೆಯಲು ಕಚೇರಿ ಹಿಂಪಡೆಯುವ ಕುತಂತ್ರ ಮಾಡುತ್ತಿದ್ದಾರೆ, ದಮ್ ಇದ್ದರೆ ಕಚೇರಿಯನ್ನು ಹಿಂಪಡೆಯಲಿ ನೋಡೋಣ, ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.