ಲೋಕಸಭಾ ಚುನಾವಣೆ ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಸತ್ಯಶೋಧನ ಸಮಿತಿಯಿಂದ ರಾಜ್ಯಾದ್ಯಂತ ಪ್ರವಾಸ : ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ
ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನಪ್ರಿಯವಾಗಿದ್ದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿ ನಡುವೆಯೂ ಕಾಂಗ್ರೆಸ್ ಪಕ್ಷ ನಿರೀಕ್ಷಿತ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವಾದ ಅಂಶಗಳನ್ನು ಶೋಧಿಸಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರ ಸತ್ಯಶೋಧನಾ ಸಮಿತಿ ರಚಿಸಿದೆ. ಈ ಸಮಿತಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಸೋಲಿನ ಪರಾಮರ್ಶೆ ನಡೆಸಿ ಪಕ್ಷದ ಜಿಲ್ಲಾ ಮುಖಂಡರು, ಕಾರ್ಯಕರ್ತರಿಂದ ಸಲಹೆ, ಸೂಚನೆಗಳನ್ನು ಪಡೆದು ವರದಿ ಸಲ್ಲಿಸಲಿದೆ ಎಂದು ಸತ್ಯಶೋಧನ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.
ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿತ್ತು. ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸರಕಾರ ನುಡಿದಂತೆ ನಡೆದ ಸರಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ" ಎಂದು ಹೇಳಿದರು.
"ಈ ಯೋಜನೆಗಳು ಕಳೆದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ತಂದು ಕೊಡುವ ನಿರೀಕ್ಷೆ ಇತ್ತು. ಕನಿಷ್ಠ 20 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೆಲ್ಲಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ 9ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳ ಜಾರಿಗೆ ಒತ್ತು ನೀಡಿದ್ದರೂ ನಿರೀಕ್ಷಿಸಿದ ಫಲಿತಾಂಶ ಬರಲು ಹಲವಾರು ಅಂಶಗಳು ಕಾರಣವಾಗಿವೆ. ಈ ಅಂಶಗಳ ಪತ್ತೆಗೆ ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ" ಎಂದರು.
1952ರಿಂದ 1977ರವರೆಗೆ ಕಾಂಗ್ರೆಸ್ ಪಕ್ಷ ಪ್ರತೀ ಚುನಾವಣೆಗಳಲ್ಲೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ನಂತರದ ಪ್ರತೀ ಚುನಾವಣೆಯಲ್ಲೂ ಸರಕಾರಗಳು ಬದಲಾಗಿವೆ. 2019ರ ಚುನಾವಣೆಯಲ್ಲಿ ಪುಲ್ವಾಮಾ ಘಟನೆಯನ್ನು ಬಿಜೆಪಿ ಭಾವನಾತ್ಮಕವಾಗಿ ಬಳಸಿಕೊಂಡ ಪರಿಣಾಮ ಅಧಿಕಾರ ಹಿಡಿಯಿತು. ನಂತರ ಈ ಘಟನೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರೇ ಹೇಳಿಕೆ ನೀಡಿ, ಕೇಂದ್ರ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿದ್ದರು ಎಂದು ಹೇಳಿದರು.
2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಈ ಬಾರಿ 400 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಆದರೆ ಮೋದಿ ಸರಕಾರದ ಪಾಪದ ಕೊಡ ತುಂಬಿದ್ದರಿಂದ, ಭ್ರಷ್ಟಾಚಾರ ಮಿತಿ ಮೀರಿದ್ದರಿಂದ ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 241 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಮಿತ್ರ ಪಕ್ಷಗಳಿಂದಾಗಿ ಅಧಿಕಾರ ಹಿಡಿಯುವಂತಾಗಿದೆ ಎಂದರು.
ವಿಪಕ್ಷಗಳ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತಿರುವ ಪ್ರಧಾನಿ ಮೋದಿ :
ಪ್ರಧಾನಿ ಮೋದಿ ಅವರು ಮುರನೇ ಬಾರಿಗೆ ಪ್ರಧಾನಿಯಾಗಿದ್ದರೂ ಅವರಲ್ಲಿ ರಾಜಕೀಯ ಮುತ್ಸದ್ಧಿತನ ಇಲ್ಲವಾಗಿದೆ, ಅವರು ವಿರೋಧ ಪಕ್ಷಗಳ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತಿದ್ದಾರೆ. ವಿರೋಧಿಗಳನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಮಾತನಾಡಲು ಹೆಚ್ಚು ಕಾಲಾವಕಾಶ ನೀಡಿಲ್ಲ, ಆದರೆ ತಮ್ಮ ಮಿತ್ರ ಪಕ್ಷದವರಾದ ಚಂದ್ರಬಾಬು ನಾಯ್ಡು ಅವರಿಗೆ 15 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿದ್ದಾರೆ. ಇದರಿಂದ ಬೇಸತ್ತು ಮಮತಾ ಬ್ಯಾನರ್ಜಿ ಸಭೆಯಿಂದ ಹೊರ ಬಂದಿದ್ದಾರೆ ಎಂದರು.
ಬಜೆಟ್ನಲ್ಲೂ ಮಿತ್ರ ಪಕ್ಷದವರ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿರುವ ಮೋದಿ ಸರಕಾರ ತೆರಿಗೆ ನೀಡುವುದರಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅನುದಾನವನ್ನೇ ನೀಡಿಲ್ಲ. ಈ ಮೂಲಕ ಪ್ರಧಾನಿ ಮೋದಿ ದ್ವೇಷದ ರಾಜಕಾರಣವನ್ನು ಮುಂದುವರಿಸಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮುಖಂಡರಾದ ಎಚ್.ಪಿ.ಮಂಜೇಗೌಡ, ಬಿ.ಎಚ್.ಹರೀಶ್, ಶಿವಾನಂದಸ್ವಾಮಿ, ಎಂ.ಎಸ್.ಅನಂತ್, ರೂಬೆನ್ ಮೋಸೆಸ್, ಮಲ್ಲೇಶಸ್ವಾಮಿ, ರವೀಶ್, ಸವಿತಾ ರಮೇಶ್, ಹಿರೇಮಗಳೂರು ರಾಮಚಂದ್ರ, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.