ಚಿಕ್ಕಮಗಳೂರಿನಲ್ಲಿ ಮುಂದುವರಿದ ಕಾಡಾನೆ ಹಾವಳಿ; ಕಾಡಿಗಟ್ಟಲು ಸಿಬ್ಬಂದಿ ಹರಸಾಹಸ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಳೆದ 12 ದಿನಗಳಿಂದ ಮೂಡಿಗೆರೆ ತಾಲೂಕಿನಲ್ಲಿ 17 ಆನೆಗಳು ಬೀಡುಬಿಟ್ಟಿದ್ದು, ಅವುಗಳನ್ನು ಬೇಲೂರು ಮೂಲಕ ಸಕಲೇಶಪುರ ಕಾಡಿಗೆ ಕಳಿಸಲು ಆನೆ ಕಾರ್ಯ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮುಂದಾಗಿದ್ದಾರೆ.
ಕೆಲವು ದಿನಗಳ ಹಿಂದೆ 40 ಆನೆಗಳು ಬೇಲೂರು ಚೀಕನಹಳ್ಳಿ ಮೂಲಕ ಕಾಫಿನಾಡನ್ನು ಪ್ರವೇಶಿಸಿದ್ದವು. ಭುವನೇಶ್ವರಿ ತಂಡದ 8 ಆನೆಗಳು ಈಗಾಗಲೇ ಹಾಸನ ಜಿಲ್ಲೆಗೆ ತೆರಳಿದ್ದು, ಕೆ.ಪಿ. ಕಾಲರ್ ಹೊಂದಿರುವ 21 ಆನೆಗಳು ಬೇಲೂರು ಸಮೀಪ ಬೀಡುಬಿಟ್ಟಿವೆ. ಉಳಿದಿರುವ 19 ಆನೆಗಳು ಮೂಡಿಗೆರೆ ಸಮೀಪದ ಚಂದ್ರಾಪುರ, ಜಾಗರಿಕ ಎಸ್ಟೇಟ್, ಕಾರಬೈಲು, ದಾರದಹಳ್ಳಿ ಮತ್ತು ಮೀಡಸಸಿ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು ಇವುಗಳನ್ನು ಸಕಲೇಶಪರುದತ್ತ ಓಡಿಸುವ ಕಾರ್ಯ ನಡೆಯುತ್ತಿದೆ.
ಇಲ್ಲಿಂದ ತೆರಳುವ ಆನೆಗಳು ಇನ್ನೇನು ಬೇಲೂರು ಮೂಲಕ ಸಕಲೇಶಪುರ ತಲುಪಬೇಕು ಎನ್ನುವಷ್ಟರಲ್ಲಿ ಅಲ್ಲಿನ ಗಡಿ ಭಾಗ ದಲ್ಲಿನ ಗ್ರಾಮದ ಜನರು ಪಟಾಕಿ ಸಿಡಿ ಮತ್ತೆ ಚಿಕ್ಕಮಗಳೂರು ಜಿಲ್ಲೆಯತ್ತ ಓಡಿಸುತ್ತಿದ್ದು, ಅವುಗಳು ಬಂದ ದಾರಿಯಲ್ಲಿ ತೆರಳಲು ಅಡ್ಡಿಯಾಗುತ್ತಿದೆ ಎಂದು ಆನೆ ಕಾರ್ಯಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ಉಳಿದಿರುವ ಆನೆಗಳನ್ನು ಬಂದ ದಾರಿಯಲ್ಲೇ ಕಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗ ಹಲಸಿನ ಹಣ್ಣಿನ ಕಾಲವಾಗಿರುವುದರಿಂದ ಅಷ್ಟು ಸುಲಭವಾಗಿ ಕಾಡಿಗೆ ತೆರಳಲು ಆನೆಗಳು ಹಿಂದೇಟು ಹಾಕುತ್ತಿವೆ ಎನ್ನಲಾಗುತ್ತಿದೆ.
ಬಗುನೆ, ಬಾಳೆ, ಹಲಸಿನ ಹಣ್ಣುಗಳು ಹೇರಳವಾಗಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಿಗುವುದರಿಂದ ಕಾಡಿನತ್ತ ಮುಖ ಮಾಡಲು ಆನೆಗಳು ಹಿಂದೇಟು ಹಾಕುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆನೆಕಾರ್ಯಪಡೆಯ ತಂಡದ ಸದಸ್ಯರು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ನಿಗಾವಿಡುವ ಮೂಲಕ ಅವುಗಳು ಊರಿನ ಕಡೆ ಮುಖ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಮನೆಯೊಂದರ ಬಾಗಿಲಿಗೆ ಬಂದಿದ್ದ ಒಂಟಿ ಸಲಗ ಹಿಂದಿರುಗಿದೆ. ತೋಟ ದಲ್ಲಿ ಬಾಳೆಯನ್ನು ನಾಶಪಡಿಸಿದೆ. ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗೆ ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರಲ್ಲಿ ಭಯ ಮೂಡಿಸಿದೆ. ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈಗಾಗಲೇ ಆನೆಗಳು ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡಿವೆ. ಮುಂದೆ ಅಹಿತಕರ ಘಟನೆ ನಡೆಯುವ ಮುಂಚೆ ಆನೆಗಳನ್ನು ಕಾಡಿಗಟ್ಟಬೇಕೆಂದು ಮನವಿ ಮಾಡಿದ್ದಾರೆ.