ಯತ್ನಾಳ್ ನಕಲಿ, ದುರಂತ ನಾಯಕ : ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ
ಚಿಕ್ಕಮಗಳೂರು : ವೀರಶೈವ ಲಿಂಗಾಯತ ಸಮಾಜಕ್ಕೆ ಬಿ.ವೈ.ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ಕೊಡುಗೆ ಅಪಾರ.ಅವರ ಏಳಿಗೆಯನ್ನು ಸಹಿಸದೆ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಹುನ್ನಾರ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶನಿವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ವಿಜಯೇಂದ್ರ ನಮ್ಮ ಸಮಾಜದ ಮುತ್ತುಗಳು. ವಿಜಯೇಂದ್ರ ಜತೆಗೆ ವೀರಶೈವ ಲಿಂಗಾಯತ ಸಮಾಜವಿದೆ. ಬಸನಗೌಡ ಪಾಟೀಲ್ ಯತ್ನಾಳ್ ನಕಲಿ ನಾಯಕ. ಜತೆಗೆ ದುರಂತ ನಾಯಕ ಎಂದು ಕಿಡಿಕಾರಿದರು.
‘ಮಿಸ್ಟರ್ ಯತ್ನಾಳ್, ಮಾರಿಹಬ್ಬದಲ್ಲಿ ಕುರಿ ಬಲಿ ಕೊಡುವಾಗ ಕುಂಕುಮ ಹಚ್ಚುತ್ತಾರೆ. ನೀರು ಹಾಕುತ್ತಾರೆ. ಅದೇ ರೀತಿ ನಿನ್ನನ್ನು ಬಲಿಪಶು ಮಾಡುತ್ತಾರೆ. ಎಲುಬಿಲ್ಲದ ನಾಲಿಗೆ ರೀತಿಯಲ್ಲಿ ಯತ್ನಾಳ್ ಮಾತನಾಡುತ್ತಿದ್ದಾನೆ. ನಿನಗೆ ನಾಚಿಕೆಯಾಗಬೇಕು. ನಿನ್ನನ್ನು ಯಾರೋ ಬೇರೆಯವರು ಆಡಿಸುತ್ತಿದ್ದಾರೆ. ಮಠಾಧೀಶರ ಬಗ್ಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿರುವ ನಿನಗೆ ಜನ ಪಾಠ ಕಲಿಸುತ್ತಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರು ಅನಿವಾರ್ಯ ಕಾರಣದಿಂದ ಕೆಜೆಪಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು. ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗುತ್ತದೆಂದು ಮಠಾಧೀಶರು ಹೇಳಿದ್ದರು. ಬಿಜೆಪಿಯವರಿಗೆ ಇದು ನೆನಪಿಲ್ಲವೇ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಭಿನ್ನಮತೀಯರಿಗೆ ಬಿಜೆಪಿ ಎಚ್ಚರಿಕೆ ನೀಡಬೇಕಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಮುಂದಿನ ಚುನಾವಣೆ ವಿಜಯೇಂದ್ರ ಅವರ ನೇತೃತ್ವದಲ್ಲಿ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆಂದು ನುಡಿದರು.