ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ
Photo : x/@BYVijayendra
ಚಿತ್ರದುರ್ಗ : ಚಿತ್ರದುರ್ಗದ ವಿಆರ್ಎಸ್ ಬಡಾವಣೆಯಲ್ಲಿರುವ ಇತ್ತೀಚೆಗಷ್ಟೇ ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಹಾಗೂ ಅವರ ತಂದೆ-ತಾಯಿಯರಿಗೆ ಧೈರ್ಯಗೆಡದಂತೆ ನೈತಿಕ ಸ್ಥೈರ್ಯ ತುಂಬಿದ ವಿಜಯೇಂದ್ರ, ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ಅತ್ಯುಗ್ರವಾಗಿ ಖಂಡಿಸುವ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣ ಮಾಹಿತಿ ಹಾಗೂ ಪರಸ್ಪರ ಸ್ನೇಹ ಬೆಸೆಯುವ ತಾಣವಾಗಬೇಕು ಆದರೆ ದ್ವೇಷ, ಕೊಲೆ, ವಿಕೃತ ಹರಡುವ ಮಟ್ಟಕ್ಕೆ ವಿಸ್ತಾರಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸುವವರೆಗೂ ಯಾವ ಹಸ್ತಕ್ಷೇಪಕ್ಕೂ ಪೊಲೀಸರು ಮಣಿಯಬಾರದು, ರೇಣುಕಾ ಸ್ವಾಮಿ ಕೊಲೆಗೆ ನ್ಯಾಯ ಸಿಗಲೇಬೇಕು, ತಪ್ಪಿತಸ್ಥರು ಎಷ್ಟೇ ದೊಡ್ಡವರಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಎಸ್.ಲಿಂಗಮೂರ್ತಿ, ಹನುಮಂತೇಗೌಡ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಚಿತ್ರದುರ್ಗದಲ್ಲಿಂದು ಇತ್ತೀಚೆಗಷ್ಟೇ ಹತ್ಯೆಗೀಡಾದ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಇನ್ನೂ ಪ್ರಪಂಚವನ್ನೇ ಕಾಣದ ಕಂದಮ್ಮನನ್ನು ಹೊತ್ತುಕೊಂಡಿರುವ ಹಾಗೂ ತನ್ನ ಸುಂದರ ಬದುಕನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಎದುರಿಸುತ್ತಿರುವ ರೇಣುಕಾಸ್ವಾಮಿ ಪತ್ನಿ ಹಾಗೂ ಅವರ ತಂದೆ-ತಾಯಿಯರಿಗೆ… pic.twitter.com/QhEEpSG1bc
— Vijayendra Yediyurappa (@BYVijayendra) June 18, 2024