ಚಿತ್ರದುರ್ಗ | ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಯುವಕನಿಂದ ಮಾನಸಿಕ ಕಿರುಕುಳ : ಪೋಷಕರ ಆರೋಪ
ಚಿತ್ರದುರ್ಗ: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಖಾಸಗಿ ಕಾಲೇಜಿನಲ್ಲಿ ಶುಕ್ರವಾರ ವರದಿಯಾಗಿದೆ.
ಪ್ರಥಮ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದ ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಪ್ರೇಮಾ ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾಳನ್ನು ಕೂಡಲೇ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆಯ ನಹೀಮ್, ರಘು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿಯ ಸಾವಿನ ಸುದ್ದಿಯನ್ನು ಕಾಲೇಜು ಆಡಳಿತ ಮಂಡಳಿ ಪೋಷಕರಿಗೆ ತಿಳಿಸಿದ್ದು, ಆಸ್ಪತ್ರೆಗೆ ಆಗಮಿಸಿದ ಪ್ರೇಮಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
‘ತನ್ನ ಮಗಳಿಗೆ ಪ್ರೀತಿಸುವಂತೆ ಓರ್ವ ಯುವಕ ಪೀಡಿಸುತ್ತಿದ್ದು, ಪ್ರೇಮಾಳಿಗೆ ಪ್ರತಿನಿತ್ಯ ವಾಟ್ಸ್ ಆ್ಯಪ್‌ನಲ್ಲಿ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದ. ಯುವಕನ ಈ ಕಿರುಕುಳಕ್ಕೆ ಬೇಸತ್ತು ಪ್ರೇಮಾ ಆತ್ಮಹತ್ಯೆ ಮಾಡಿದ್ದಾಳೆ’ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿರುಕುಳ ನೀಡುತ್ತಿದ್ದ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.