ಹರ್ಯಾಣ ಹಿಂಸಾಚಾರ ಕುರಿತಂತೆ ಮಾಡಿದ ಟ್ವೀಟ್ಗೆ ಬಲಪಂಥೀಯರ ಟ್ರೋಲ್ ದಾಳಿ: ಟ್ವಿಟರ್ ಖಾತೆ ಅಳಿಸಿದ ನಟ ಗೋವಿಂದ
ನಟ ಗೋವಿಂದ (Photo: PTI)
ಹೊಸದಿಲ್ಲಿ: ನೂಹ್ ಹಿಂಸಾಚಾರದ ಕುರಿತು ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ ನಟ ಗೋವಿಂದ ವಿರುದ್ಧ ಬಲಪಂಥೀಯರು ಮಾಡಿದ ಟ್ರೋಲ್ಗಳ ಬಳಿಕ ಗೋವಿಂದ ಅವರು ತಮ್ಮ ಟ್ವಿಟರ್ ಖಾತೆಯನ್ನು ಅಳಿಸಿದ್ದಾರೆ.
ಮುಸ್ಲಿಮರ ಅಂಗಡಿಗಳನ್ನು ಗುರಿ ಮಾಡಿ ಲೂಟಿ ಮಾಡಲಾಗುತ್ತಿದೆ ಎನ್ನಲಾದ ವಿಡಿಯೋ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೋವಿಂದ ಅವರು, "ನಾವು ಎಲ್ಲಿಗೆ ತಲುಪಿದ್ದೇವೆ? ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವ ಮತ್ತು ಅಂತಹ ಕೆಲಸಗಳನ್ನು ಮಾಡುವ ಜನರಿಗೆ ನಾಚಿಕೆಯಾಗಬೇಕು,” ಎಂದು ಅವರು ಕಿಡಿ ಕಾರಿದ್ದರು. ಅಲ್ಲದೆ, ಶಾಂತಿಯನ್ನು ಕಾಪಾಡಿಕೊಳ್ಳಲು ಕರೆ ನೀಡಿದ ಅವರು, ಭಾರತ ಪ್ರಜಾಪ್ರಭುತ್ವ ದೇಶ, ನಿರಂಕುಶಾಧಿಕಾರವಲ್ಲ ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತ್ಯುತ್ತರವಾಗಿ ನೀಡಿದ್ದ ನೆಟ್ಟಿಗರೊಬ್ಬರ ಟ್ವೀಟ್ಗೂ ಗೋವಿಂದ್ ಲೈಕ್ ಮಾಡಿದ್ದರು. ಮಣಿಪುರ, ಕಾಶ್ಮೀರ ಮತ್ತು ಹರಿಯಾಣವನ್ನು ಹೊತ್ತಿ ಉರಿಯಲು ಬಿಜೆಪಿ ಕಾರಣ ಎಂದು ಆ ನೆಟ್ಟಿಗರು ಪ್ರತಿಪಾದಿಸಿದ್ದರು.
ಇದರ ಬಳಿಕ ಬಲಪಂಥೀಯರು ಗೋವಿಂದ್ ವರುದ್ಧ ಟ್ರೋಲ್ ದಾಳಿ ಆರಂಭಿಸಿದ್ದು, ಇದರಿಂದ ಬೇಸತ್ತ ಗೋವಿಂದ ಅವರು ಮೊದಲಿಗೆ ತಾನು ಹಾಕಿದ್ದ ಟ್ವೀಟ್ ಅನ್ನು ಅಳಿಸಿದ್ದಾರೆ. ಅದಾಗ್ಯೂ, ಟ್ರೋಲ್ಗಳು ನಿಲ್ಲದಾದಾಗ ಕೊನೆಗೆ ಟ್ವಿಟರ್ ಖಾತೆಯನ್ನೇ ಅಳಿಸಿ ಹಾಕಿದ್ದಾರೆ.
Update: ಗುರುಗ್ರಾಮ ಹಿಂಸಾಚಾರ ಕುರಿತ ಟ್ವೀಟ್ ತನ್ನದಲ್ಲ, ಖಾತೆ ಹ್ಯಾಕ್ ಮಾಡಲಾಗಿತ್ತು ಎಂದ ನಟ ಗೋವಿಂದ