ಬಿಗ್ಬಾಸ್ ಸ್ಪರ್ಧಿ ಪ್ರತಾಪ್ಗೆ ಅನಾರೋಗ್ಯ; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ
ಡ್ರೋನ್ ಪ್ರತಾಪ್ (Image: X/@RO_GOAT45)
ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಪಡೆದುಕೊಂಡು ಬಿಗ್ಬಾಸ್ ಮನೆಗೆ ವಾಪಸ್ಸಾಗಿರುವುದಾಗಿ ವರದಿಯಾಗಿದೆ.
ಗುರುವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ರಾಮೋಹಳ್ಳಿಯಲ್ಲಿರುವ ಸಂಜೀವಿನಿ ಆಸ್ಪತ್ರೆಯ ವೈದ್ಯ ಡಾ.ಪೂರ್ವಜ್, ಜ.2ರ ಮಧ್ಯರಾತ್ರಿ 2.30ಕ್ಕೆ ಡ್ರೋನ್ ಪ್ರತಾಪ್ರನ್ನು ಬಿಗ್ಬಾಸ್ ಸಿಬ್ಬಂದಿ ಕರೆದುಕೊಂಡು ನಮ್ಮ ಆಸ್ಪತ್ರೆಗೆ ಬಂದಾಗ ಪ್ರತಾಪ್ ಅವರಿಗೆ ಬಿಪಿ ಕಡಿಮೆಯಿತ್ತು, ಅವರಿಗೆ ಏಳೆಂಟು ಬಾರಿ ಭೇದಿ ಆಗಿತ್ತು. ಒಂದೆರಡು ಬಾರಿ ವಾಂತಿ ಆಗಿತ್ತು. ಒಂದು ದಿನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಜ.4ರ ಮಧ್ಯಾಹ್ನ 1 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಾಪ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಯಾವುದೇ ಸುಳಿವಿಲ್ಲ. ಅವರು ವಾಂತಿ ಮಾಡಿದಾಗ ಯಾವುದೇ ರೀತಿಯ ಮೆಡಿಸಿನ್ ತೆಗೆದುಕೊಂಡಿದ್ದ ಬಗ್ಗೆ ಲಕ್ಷಣಗಳು ಇರಲಿಲ್ಲ. ಆತ್ಮಹತ್ಯೆಗೆ ಯತ್ನ, ಮಾತ್ರೆ ನುಂಗಿರುವ ಬಗ್ಗೆ ಯಾವುದೇ ಪ್ರಯತ್ನವೂ ಆಗಿಲ್ಲ, ಅವರಿಗೆ ಗ್ಯಾಸ್ಟ್ರಿಕ್ ಹಾಗೂ ನಿಶಕ್ತಿಯಿಂದಾಗಿ ಈ ರೀತಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಸಂಜೀವಿನಿ ಆಸ್ಪತ್ರೆಯ ವೈದ್ಯ ಡಾ.ಪೂರ್ವಜ್ ಮಾಹಿತಿ ನೀಡಿದ್ದಾರೆ.