ಇಸ್ರೇಲ್ ಚಲನಚಿತ್ರೋತ್ಸವ ರದ್ದುಗೊಳಿಸಿ ಎಂದು ಎನ್ಎಫ್ಡಿಸಿಗೆ ಆಗ್ರಹಿಸಿ ಹೇಳಿಕೆ ಬಿಡುಗಡೆಗೊಳಿಸಿದ ಗಣ್ಯ ನಾಗರಿಕರ ಗುಂಪು
Photo:X/@nfdcindia
ಹೊಸದಿಲ್ಲಿ: ಮುಂಬೈಯ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನೆಮಾದಲ್ಲಿ ಬುಧವಾರ ಮತ್ತು ಗುರುವಾರ ನಡೆಯಲಿರುವ ಇಸ್ರೇಲಿ ಚಲನಚಿತ್ರಗಳನ್ನು ಪ್ರದರ್ಶಿಸುವ ಚಲನಚಿತ್ರೋತ್ಸವ ರದ್ದುಗೊಳಿಸಬೇಕೆಂದು ಪ್ರಮುಖ ನಾಗರಿಕರ ಒಂದು ಗುಂಪು ನ್ಯಾಷನಲ್ ಫಿಲ್ಮ್ ಡೆವಲೆಪ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಆಗ್ರಹಿಸಿದೆ.
“ಎನ್ಎಫ್ಡಿಸಿಯ ಈ ಚಲನಚಿತ್ರಗಳ ಪ್ರದರ್ಶನವು, ಇಡೀ ಜಗತ್ತು ಇಸ್ರೇಲಿ ಯುದ್ಧಾಪರಾಧಗಳಿಗೆ, ಗಾಝಾದಲ್ಲಿನ ಮತ್ತು ಫೆಲೆಸ್ತೀನ್ನಾದ್ಯಂತ ನಡೆಯುತ್ತಿರುವ ನರಮೇಧಕ್ಕೆ ಸಾಕ್ಷಿಯಾಗಿರುವ ಸಂದರ್ಭದಲ್ಲಿ ಲಜ್ಜೆಯಿಲ್ಲದೆ ನಡೆಸಲಾಗುತ್ತಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ನಟರಾದ ನಾಸಿರುದ್ದೀನ್ ಶಾ, ರತ್ನಾ ಪಾಠಕ್, ಸ್ವಾತಂತ್ರ್ಯ ಹೋರಾಟಗಾರ ಜಿ ಜಿ ಪಾರಿಖ್, ಸಾಕ್ಷ್ಯಚಿತ್ರ ತಯಾರಕ ಆನಂದ್ ಪಟವರ್ಧನ್ ಮತ್ತು ಮಹಾತ್ಮ ಗಾಂಧಿ ಅವರು ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿದ್ದಾರೆ.
“ಈಗಿನ ಸನ್ನಿವೇಶದಲ್ಲಿ ಇಸ್ರೇಲಿ ಚಲನಚಿತ್ರಗಳನ್ನು ಪ್ರದರ್ಶಿಸುವ ಎನ್ಎಫ್ಡಿಸಿ ಮತ್ತು ಎನ್ಎಂಐಸಿ ನಿರ್ಧಾರವು ಅನೈತಿಕವಾಗಿದೆ ಮತ್ತು ನ್ಯಾಯಪರವಲ್ಲ,” ಎಂದು ಹೇಳಿಕೆ ತಿಳಿಸಿದೆಯಲ್ಲದೆ ಇಸ್ರೇಲ್ ಅಂತರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗುವ ತನಕ ಯಾವುದೇ ಇಸ್ರೇಲಿ ಸಿನಿಮಾ ಪ್ರದರ್ಶಿಸುವುದರಿಂದ ಎನ್ಎಫ್ಡಿಸಿ ಮತ್ತು ಎನ್ಎಂಐಸಿ ದೂರ ಸರಿಯಬೇಕೆಂದು ನಾವು ರಾಷ್ಟ್ರವ್ಯಾಪಿ ಮತ್ತು ಅಂತರರಾಷ್ಟ್ರೀಯ ಅಭಿಯಾನ ಆರಂಭಿಸಿದ್ದೇವೆ,” ಎಂದು ಹೇಳಿಕೆ ತಿಳಿಸಿದೆ.