ದೀಪಿಕಾ – ರಣ್ವೀರ್ ದಂಪತಿ ಮಗುವಿಗೆ ʼದುಆʼ ಹೆಸರಿಗೆ ಬಲಪಂಥೀಯರ ಆಕ್ರೋಶ
ದೀಪಿಕಾ – ರಣ್ವೀರ್ | PC : bollywoodhungama.com
ಬಾಲಿವುಡ್ ಸುಪ್ರಸಿದ್ಧ ನಟರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗಳಿಗೆ ತಮ್ಮ ಮಗುವಿನ ಹೆಸರನ್ನು ಮೊನ್ನೆ ಬಹಿರಂಗಪಡಿಸಿದರು. ಆ ಹೆಸರು 'ದುಆ ಪಡುಕೋಣೆ ಸಿಂಗ್'. ದೀಪಿಕಾಗೆ ಸೆಪ್ಟೆಂಬರ್ 8, 2024 ರಂದು ಜನಿಸಿತ್ತು. ಮಗುವಿನ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣವಾದ Instagramನಲ್ಲಿ ಹಂಚಿಕೊಂಡ ರಣವೀರ್ ದೀಪಿಕಾ ದಂಪತಿ, ತಮ್ಮ ಪ್ರಾರ್ಥನೆಯ ಪ್ರತಿಫಲವಾದ ಕಾರಣ ಮಗುವಿನ ಹೆಸರು: 'ದುಆ' ಆಗಿದೆ ಎಂದು ವಿವರಿಸಿದ್ದರು.
'ದುಆ' ಎಂದರೆ 'ಪ್ರಾರ್ಥನೆ' ಅಥವಾ 'ಬೇಡಿಕೆ' ಎಂದರ್ಥ; ಇದು ಭಾರತದ ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳಾದ್ಯಂತ ಆಳವಾದ ಅಧ್ಯಾತ್ಮಿಕ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಮಗುವಿನ ಹೆತ್ತವರು ಹೇಳಿದಂತೆ, 'ದುಆ' ಹೆಸರಿಗೆ ಸುಂದರವಾದ ಅರ್ಥವಿದೆ. ಇದರ ಅರ್ಥ 'ಪ್ರಾರ್ಥನೆ' ಎಂದಾಗಿದೆ. ಈ ಅರ್ಥವು ಹೆಸರಿಗೆ ಆಳವಾದ ಆಧ್ಯಾತ್ಮಿಕ ಗುಣವನ್ನು ನೀಡುತ್ತದೆ.
ವ್ಯಕ್ತಿಯೊಬ್ಬನ ಮತ್ತು ದೇವರ ನಡುವಿನ ಸಂವಹನದ ಪ್ರಬಲ ಪರಿಕಲ್ಪನೆಯನ್ನು 'ದುಆ' ಪ್ರತಿನಿಧಿಸುತ್ತದೆ; 'ದುಆ'ದಲ್ಲಿ ಒಬ್ಬರು ಮಾರ್ಗದರ್ಶನ, ಸಹಾಯ, ಆಶೀರ್ವಾದವನ್ನು ಬಯಸುತ್ತಾರೆ. 'ದುಆ' ಸಾರ್ವತ್ರಿಕ ಅರ್ಥವನ್ನು ಹೊಂದಿದೆ; ಧರ್ಮಗಳು ಮತ್ತು ಪ್ರದೇಶಗಳಾದ್ಯಂತ ಮಹತ್ವವನ್ನು ಹೊಂದಿದೆ.
ಈ ಸಾಂಸ್ಕೃತಿಕ ವಿನಿಮಯವನ್ನು ಭಾರತದೊಳಗೆ ಜನರನ್ನು ಒಂದಾಗಿಸುವ ಅಂಶವಾಗಿ ನೋಡಲಾಗುತ್ತದೆ; ಇಲ್ಲಿ ವಿವಿಧ ಸಮುದಾಯಗಳು ಒಟ್ಟಿಗೆ ವಾಸಿಸುತ್ತವೆ, ಹಾಗೆಯೇ, ಭಾರತೀಯ ಭಾಷಾ ಸಂಪತ್ತನ್ನು ಶ್ರೀಮಂತಗೊಳಿಸುತ್ತವೆ. ಮಗುವಿಗೆ ದುಆ ಎಂದು ಹೆಸರಿಸುವ ಮೂಲಕ, ಆ ಕುಟುಂಬ ತಮ್ಮ ಪುಟ್ಟ ಮಗು ಆಳವಾದ ಉದ್ದೇಶ, ದಯೆ ಮತ್ತು ಸಹಾನುಭೂತಿಯೊಂದಿಗೆ ಬೆಳೆಯಬೇಕೆಂದು ಬಯಸುತ್ತಾರೆ.
ಆದರೆ, ಬಲಪಂಥೀಯ ಟ್ರೋಲ್ ಪಡೆ ಮಾತ್ರ ಏಕಾಏಕಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ವಿರುದ್ಧ ಟ್ರೊಲ್ ಸುರಿಮಳೆಯನ್ನೇ ಪ್ರಾರಂಭಿಸಿದರು. ಮಗುವಿನ ಹೆಸರಿನ ಕುಂಟು ನೆಪದಡಿ ಬಾಲಿವುಡ್ ದಂಪತಿಯ ವಿರುದ್ಧ ಹರಿಹಾಯಲಾರಂಭಿಸಿದರು. ಒಬ್ಬನಂತೂ 'ಅಲ್ಲಾಹು ಅಕ್ಬರ್ ಪಡುಕೋಣೆ ಸಿಂಗ್' ಎಂದು ನಾಮಕರಣ ಮಾಡಬಹುದಿತ್ತು ಎಂದು ಹೇಳಿದರೆ, ಇನ್ನೊಬ್ಬನು: ಇದೊಂದು ಮುಸ್ಲಿಂ ಜಗತ್ತಿನ ಅರಬ್ಬೀ ಹೆಸರಾಗಿದೆ; ಎಂಥಹ ಹಿಂದೂ ನೀವು ಎಂದು ಪ್ರಶ್ನಿಸಿದ.
ಒಬ್ಬ ಮಹಿಳೆ ನಿಮಗೆ ಹಿಂದೂ ಹೆಸರಿನ ಕೊರತೆಯಿದೆಯೇ? ಎಂದು ವಾಗ್ದಾಳಿ ನಡೆಸಿದಳು. 'ದುಆ' ಎಂಬ ಹೆಸರಿಗಿಂತ 'ಪ್ರಾರ್ಥನಾ' ಎಂಬ ಹೆಸರು ಉತ್ತಮವಾಗಿತ್ತು ಎಂದೂ ಬಾಲಿವುಡ್ ದಂಪತಿಗಳಿಗೆ ಪಾಠ ಮಾಡಲಾಯಿತು. ಮಗುವಿನ ಹೆಸರು: 'ದುಆ ಖಾನ್' ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವುದೇ ಉತ್ತಮ ಎಂದು ಒಬ್ಬ ಬಲಪಂಥೀಯ ನೆಟ್ಟಿಗನೊಬ್ಬ ವಿಷಕಾರಿದರೆ, ಇನ್ನೊಬ್ಬನು ಮಗುವಿನ ಹೆಸರನ್ನು 'ಮುಹಮ್ಮದ್' ಮತ್ತು 'ಆಯಿಶಾ' ಎಂದು ಬದಲಾಯಿಸಬಹುದು ಎಂದು ಬಿಟ್ಟಿ ಸಲಹೆ ನೀಡಿದ.
ಒಟ್ಟಾರೆ ತಮಗೆ ಯಾವೊಂದು ಕೆಲಸವೂ ಇಲ್ಲದದ್ದರೆ, ತಮಗೆ ಯಾವುದೇ ಅನುಮತಿಯೂ ಇಲ್ಲದೇ ಇರುವಲ್ಲಿಗೆ ನುಗ್ಗಿ ತಾವೇ ಅನುಮತಿ ಕೊಡುವವರ ಹಾಗೇ, ತಾವೇ ತೀರ್ಪು ಕೊಡುವವರ ಹಾಗೆ ವರ್ತಿಸೋದು ಈ ಬಲಪಂಥೀಯ ಟ್ರೋಲ್ ಪಡೆಯ ಕಾಯಿಲೆ. ದೀಪಿಕಾ ವಿಷಯದಲ್ಲೂ ಹಾಗೇ ನಡೆದುಕೊಂಡಿದ್ದಾರೆ ಈ ಟ್ರೋಲ್ ಪಡೆಗಳು. ದೀಪಿಕಾ ವಿರುದ್ಧ ಈ ಬಲಪಂಥೀಯ ರಿಗೆ ಕೆಲವು ಹಳೆಯ ದ್ವೇಷ ಕೂಡ ಇದೆ.
ಜೇ ಎನ್ ಯೂ ನಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಾಗ ಅಲ್ಲಿಗೆ ಹೋಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸುದ್ದಿಯಾಗಿದ್ದರು ದೀಪಿಕಾ ಪಡುಕೋಣೆ. ಆಗಲೇ ಆಕೆಯ ವಿರುದ್ಧ ಈ ದ್ವೇಶಕೋರರು ಮುಗಿ ಬಿದ್ದಿದ್ದರು. ಈಗ ಆಕೆಯ ಮಗುವಿನ ಹೆಸರಿನ ನೆಪದಲ್ಲಿ ಮತ್ತೆ ದ್ವೇಷ ಕಾರುತ್ತಿದ್ದಾರೆ.
ಉರ್ದು ಅಂದ ಕೂಡಲೇ ಮುಸಲ್ಮಾನರ ಭಾಷೆ ಅನ್ನುವುದು, ದುಆ ಅಂದ ಕೂಡಲೇ ಅದು ಮುಸ್ಲಿಮರ ಪದ ಅನ್ನುವುದು .... ಹೀಗೆ ಇವರಿಗೆ ಪ್ರತಿಯೊಂದರಲ್ಲೂ ದ್ವೇಷವೇ ಕಾಣುವುದು. ಹಾಗಾಗಿ ಅವರು ಬೇರೆಯವರಿಗೆ ಕೊಡುವುದು ದ್ವೇಷ ಮಾತ್ರ. ನಮ್ಮ ದೇಶದಲ್ಲಿ ವ್ಯಾಪಕವಾಗಿರುವ ಈ ದ್ವೇಷದ ಕ್ಯಾನ್ಸರ್ ಶೀಘ್ರ ಗುಣವಾಗಲಿ ಎಂದು ದುಆ ಮಾಡಬೇಕಿದೆ.