ಕೋಲಾರ ಚಿನ್ನದ ಗಣಿಗಳ ಇತಿಹಾಸವೂ ಮತ್ತು ಪಾ.ರಂಜಿತ್‌ರ ತಂಗಲಾನ್
ತಂಗಲಾನ್: ಇದರ ಅರ್ಥ ಒಂದು ಜನಾಂಗದ ಹೆಸರು ಅಥವಾ ಚಿನ್ನದ ಮನುಷ್ಯನಂತೆ. ಸಿನೆಮಾ ಟೈಟಲ್
ಕಾರ್ಡ್ ಕಪ್ಪು ಶಿಲೆಗಳ ಮೇಲೆ ಫಳಪಳನೆ ಹೊಳೆಯುವ ಚಿನ್ನದ ಎಳೆಗಳೊಂದಿಗೆ (ಕ್ವಾಡ್ಝ್ ವೇನ್ಸ್) ಪ್ರಾರಂಭಗೊಳ್ಳುತ್ತದೆ. ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಆರ್ಕಾಟ್ ಜಿಲ್ಲೆಯ ಒಂದು ಪ್ರಾಚೀನ ಹಳ್ಳಿ ಮತ್ತು ಹಳ್ಳಿಯಲ್ಲಿ ತಂಗಲಾನ್ ಮತ್ತು ಅವನ ಜನರ ಬದುಕು ಅನಾವರಣಗೊಳ್ಳುತ್ತದೆ. ಮೊದಲಿಗೆ ಮೈಸೂರು ಸಂಸ್ಥಾನ/ಟಿಪ್ಪುಸುಲ್ತಾನ್ ಹಿಡಿತದಲ್ಲಿದ್ದ ಕೆಜಿಎಫ್ ಚಿನ್ನದ ಗಣಿಗಳಲ್ಲಿ ಸ್ಥಳೀಯರು (ತೆಲುಗು-ಕನ್ನಡಿಗರು) ಕೆಲಸ ಮಾಡಲು ನಿರಾಕರಿಸಿದಾಗ ಬ್ರಿಟಿಷರ ಏಜೆಂಟ್ಸ್ (ಕಂಗಾನೀಸ್) ಉತ್ತರ ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳ ಬಡವರು, ಜೀತಗಾರರು ಮತ್ತು ಜೈಲುಗಳಿಂದ ಬಿಡುಗಡೆಯಾಗುತ್ತಿದ್ದ ಜನರನ್ನು ಹಣ ಕೊಟ್ಟು ಕೆಜಿಎಫ್‌ಗೆ ಕರೆದುತಂದರು. ಬಂದವರು ಗಣಿಗಳ ಸುತ್ತಲೂ ಸಣ್ಣಸಣ್ಣ ಬಿಡಾರಗಳನ್ನು ಹಾಕಿಕೊಂಡು ಗಣಿ ಕೆಲಸದಲ್ಲಿ ತೊಡಗಿಕೊಂಡರು. ಅವರಿಗೆ ಮೊದಮೊದಲು ಬ್ರಿಟಿಷರು ಕೂಲಿಯ ಬದಲಿಗೆ ಕಂಠರಾಯ (ಬೆಳ್ಳಿನಾಣ್ಯಗಳನ್ನು) ನೀಡುತ್ತಿದ್ದರು. ಅದನ್ನು ಸಿನೆಮಾದಲ್ಲಿ ತೋರಿಸಲಾಗಿದೆ.
ಸಿನೆಮಾದಲ್ಲಿ ಮೂರು ರೀತಿಯ ವಿಷಯಗಳು ಏಕಕಾಲಕ್ಕೆ ತೆರೆದುಕೊಳ್ಳುತ್ತವೆ. ಒಂದು ಸ್ಥಳೀಯ ಜನರು (ಪರಯ/ದ್ರಾವಿಡರು) ಚಿನ್ನದ ಹುಡುಕಾಟದಲ್ಲಿ ತೊಡಗಿಕೊಳ್ಳುವುದು. ಎರಡು, ಇತಿಹಾಸದಲ್ಲಿ ಆರ್ಯರು, ಮುಸ್ಲಿಮರು ಮತ್ತು ಯುರೋಪಿಯನ್ನರು ಸ್ಥಳೀಯ ಜನರ ನೆಲ/ಜಲ ಸಂಪತ್ತನ್ನು ಕಿತ್ತುಕೊಂಡು ಸಾಮಾಜಿಕ ಸಾಮಾನತೆಯನ್ನು ನಿರಾಕರಿಸಿ ಅವರನ್ನು ಅಸ್ಪಶ್ಯರನ್ನಾಗಿಸಿದ್ದು. ಇವು ಒಂದು ರೀತಿಯಲ್ಲಿ ಮಧ್ಯೆ ಮಧ್ಯೆ ರೂಪಕಗಳ ರೀತಿಯಲ್ಲಿ ಬಂದು ಹೋಗುತ್ತಿರುತ್ತವೆ. ಇದರ ನಡುವೆ ಚಿನ್ನ ಹುಡುಕಾಡುವ ವೇಳೆಯಲ್ಲಿ ಆರತಿ (ಬುಡಕಟ್ಟು/ಗ್ರಾಮದೇವತೆ) ಮತ್ತು ನಾಗರ ಹಾವುಗಳು ಎದುರಾಗುತ್ತವೆ. ಇದು ಪ್ರಾಚೀನ ಇತಿಹಾಸದಲ್ಲಿ
ಆರ್ಯರ ವಿರುದ್ಧ ಮೊದಲಿಗೆ ದ್ರಾವಿಡರ ಸಂಕೇತವಾದ ನಾಗದೇವತೆ ‘ಆಯವಿಟ್ರ’ ಕಾಣಿಸಿಕೊಳ್ಳುವುದನ್ನು ಜ್ಞಾಪಿಸುತ್ತದೆ. ಒಂದು ಕಡೆ ನವಿಲನ್ನು ತೋರಿಸಲಾಗುತ್ತದೆ. ಬ್ರಿಟಿಷರು ಮೊದಲಿಗೆ ಕೆಜಿಎಫ್ ಪ್ರದೇಶಕ್ಕೆ ಬಂದಾಗ ಇಲ್ಲಿನ ಜನರು ನವಿಲು ಎಲ್ಲೆಲ್ಲಿ ನಡೆದಾಡುತ್ತದೊ ಅಲ್ಲಿ ಚಿನ್ನದ ಜಾಡಿರುತ್ತದೆ ಎಂದು ಹೇಳುತ್ತಾರೆ. ಇದೊಂದು ಮಿಥ್ ಆಗಿದೆ. ಅದೇ ರೀತಿ ಹಳದಿ ಬಣ್ಣದ ಹೂವುಗಳಿರುವ ತಂಗೇಡಿ ಗಿಡಗಳನ್ನು ತೋರಿಸಲಾಗುತ್ತದೆ. ಇದು ಇಂಡಿಯಾದಿಂದ ಆಫ್ರಿಕಾವರೆಗೂ ಚಿನ್ನ ದೊರಕುವ ಪ್ರದೇಶಗಳಲ್ಲಿ ಕಾಣುವ ಗಿಡಗಳು ಎಂಬುದಾಗಿಭೂವಿಜ್ಞಾನಿಗಳೇ ಹೇಳಿದ್ದಾರೆ. ಇದು ಒಂದು ರೀತಿಯ ಮಿಥ್ ಆದರೂ ವೈಜ್ಞಾನಿಕವೂ ಆಗಿರಬಹುದು!
ಸಿನೆಮಾದ ಮುಖ್ಯ ಪಾತ್ರ ತಂಗಲಾನ್ (ವಿಕ್ರಮ್) ಬ್ರಿಟಿಷ್ ಅಧಿಕಾರಿ ಕ್ಲೆಮಂಟ್ ಜೊತೆಗೆ ಸೇರಿಕೊಂಡು ಆರತಿ ಮತ್ತು ನಾಗರ ಹಾವುಗಳ ಎದುರಿಗೆ ಹೋರಾಟ ಮಾಡಿ ಹಾವುಗಳನ್ನು ಸಾಯುಸುತ್ತಾನೆ. ಇದು ಏನು ಹೇಳುತ್ತದೆ? ಮೂಲಸ್ಥ ನಾಯಕನಾದ ತಂಗಲಾನ್ ಸ್ಥಳೀಯ ಸಂಪನ್ಮೂಲಗಳನ್ನು ರಕ್ಷಿಸುವ ಬದಲು ಬ್ರಿಟಿಷರ ಜೊತೆಗೆ ಕೈಜೋಡಿಸುತ್ತಾನೆ! ತಂಗಲಾನ್ ಈ ನಡುವೆ ಹಳ್ಳಿಗೆ ಹಿಂದಿರುಗುವಾಗ ಹೆಣ್ಣು ಮಕ್ಕಳಿಗೆ ಕುಪ್ಪಸಗಳನ್ನು ತಂದು ಕೊಡುತ್ತಾನೆ. ಅವುಗಳನ್ನು ಮೊದಲ ಬಾರಿಗೆ ಧರಿಸಿ ಸಂಭ್ರಮಿಸುವ ಮಹಿಳೆಯರ ದೃಶ್ಯವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಇದರ ಬಗ್ಗೆ ಪಾ.ರಂಜಿತ್ ಒಂದು ಕಡೆ ಕೆಜಿಎಫ್ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಾರ್ಮಿಕ ಹಳ್ಳಿಗೆ ಹಿಂದಿರುಗಿದಾಗ ಹಳ್ಳಿಯ ಹೆಣ್ಣು ಮಕ್ಕಳಿಗೆ ಕುಪ್ಪಸಗಳನ್ನು ತಂದುಕೊಟ್ಟ ಎಂದು ಹೇಳಿದ್ದಾರೆ. ಹಾಗೆಯೇ ಈ ದೃಶ್ಯವನ್ನು ನೋಡಿದಾಗ ಒಂದು ಕಾಲದಲ್ಲಿ ಕೇರಳದಲ್ಲಿ ಬುಡಕಟ್ಟು ಹೆಣ್ಣುಮಕ್ಕಳು ಕುಪ್ಪಸ ಧರಿಸಿದರೆ ತೆರಿಗೆ ಕಟ್ಟಬೇಕಾಗಿತ್ತು. ಅದನ್ನು ಎದುರಿಸಿ ನಿಂತು ತನ್ನ ಸ್ತನವನ್ನೇ ಕತ್ತರಿಸಿಕೊಟ್ಟ ಈಳವ ಬುಡಕಟ್ಟು ಮಹಿಳೆ ನಂಗೆಲಿಯ ಕತೆಯನ್ನು ಇಲ್ಲಿ ಊಹಿಸಿಕೊಳ್ಳಬೇಕು. ರಾಮಾನುಜಂ ಅನುಯಾಯಿ ಒಬ್ಬರು ದಲಿತ ಮಕ್ಕಳನ್ನು ಸಾಲಾಗಿ ನಿಲ್ಲಿಸಿಕೊಂಡು ಅವರಿಗೆ ಜನಿವಾರ ತೊಡಿಸಿ ನೀವೆಲ್ಲ ದನದ ಮಾಂಸ ತಿನ್ನುವುದನ್ನ್ನು ಬಿಟ್ಟುಬಿಡಬೇಕು ಎನ್ನುತ್ತಾನೆ. ಆದರೆ ಇತಿಹಾಸದಲ್ಲಿ ದನದ ಮಾಂಸ ತಿನ್ನುವುದನ್ನು ಬಿಟ್ಟವರಾಗಲಿ, ಜನಿವಾರ ತೊಟ್ಟವರಾಗಲಿ ದಲಿತರಾಗಿಯೇ ಉಳಿದುಕೊಂಡರು.
ತಂಗಲಾನ್ ತನ್ನ ಊರಿನ ಜನರನ್ನೆಲ್ಲ ಕರೆದುಕೊಂಡು ಚಿನ್ನದ ಹುಡುಕಾಟಕ್ಕೆ ಹೊರಡುತ್ತಾನೆ. ಸ್ಥಳೀಯ ಜಮೀನ್‌ದಾರ ಅವರನ್ನು ಊರುಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸುತ್ತಾನೆ. ತಂಗಲಾನ್ ‘ಇಲ್ಲೇನಿದೆ ಜೀತದ ಬದುಕನ್ನು ಬಿಟ್ಟು, ನನ್ನ ಜೊತೆಗೆ ಬನ್ನಿ. ಬ್ರಿಟಿಷ್ ಅಧಿಕಾರಿಗಳು ಚಿನ್ನ ಸಿಕ್ಕಿದಾಗ ನೀವೂ ಅದರ ವಾರಸುದಾರರಾಗಿರುತ್ತೀರಿ ಎಂದು ಹೇಳಿದ್ದಾರೆ. ನಾವು ಎಷ್ಟು ತಲೆಮಾರುಗಳ ಕಾಲ ಹೀಗೆ ಬದುಕಬೇಕು? ನನ್ನ ಜೊತೆಗೆ ಬನ್ನಿ, ನಮ್ಮ ಬದುಕು ಬಂಗಾರವಾಗುತ್ತದೆ’ ಎಂದು ಹೇಳಿ ಊರಿನ ಜನರನ್ನೆಲ್ಲ ಚಿನ್ನ ಹುಡುಕುವ ಕೆಲಸದಲ್ಲಿ ತೊಡಗಿಸುತ್ತಾನೆ. ಚಿನ್ನ ಹುಡುಕುತ್ತಾ ಹೊರಟಾಗ ಆರತಿ ಮರುರೂಪ ಪಡೆದಂತೆ ದೆವ್ವ/ಯಕ್ಷಣಿಯಾಗಿ ಮತ್ತು ನಾಗರಹಾವುಗಳು ತಂಗಲಾನ್ ಮತ್ತು ಅವನ ಜನರನ್ನು ತಡೆಯುತ್ತವೆ. ದೊಡ್ಡ ಹೋರಾಟ ನಡೆಯುತ್ತದೆ.
ಚಿನ್ನದ ಹುಡುಕಾಟ ನಡೆಸುವಾಗ ಮೆಕ್ಕಲು ಮಣ್ಣಿನಲ್ಲಿ ಚಿನ್ನವನ್ನು ಶೋಧಿಸುವುದು, ಕಲ್ಲುಗಳನ್ನು ಜಜ್ಜಿ ಪುಡಿ ಮಾಡಿ ಅದರಲ್ಲಿ ಚಿನ್ನದ ಅಂಶ ಇದೆಯೇನೊ ಎಂದು ಹುಡುಕುವುದು ಪ್ರಾಚೀನ ಕಾಲದಿಂದಲೂ ನಡೆದುಬಂದಿರುವ ವೈಜ್ಞಾನಿಕ ಹುಡುಕಾಟವಾಗಿದ್ದು ಸಿನೆಮಾದಲ್ಲಿ ಅದನ್ನೇ ತೋರಿಸಲಾಗಿದೆ. ಇದು ಈಗಲೂ ಅನೇಕ ದೇಶಗಳಲ್ಲಿ ನಡೆಯುತ್ತಿದೆ. ಈ ಹುಡುಕಾಟದಲ್ಲಿ ಕನ್ನಡ/ತಮಿಳು ಮಾತನಾಡುವ ಒಬ್ಬ ಅಧಿಕಾರಿ ಕ್ಲೆಮೆಂಟ್ ಕೆಳಗೆ ಕೆಲಸ ನಿರ್ವಸುತ್ತಿರುತ್ತಾನೆ. ಜಾನ್ ವಾರೆನ್ (1832) ಮೊದಲಿಗೆ ಕೆಜಿಎಫ್ ಪ್ರದೇಶಕ್ಕೆ ಬಂದಾಗ ತೇರು ಮತ್ತು ತೇಡು ಎಂಬ ಇಬ್ಬರು ಪರಯ ಯುವಕರು ಚಿನ್ನದ ಅದಿರಿರುವ ಕಲ್ಲುಗಳನ್ನು ತಂದು ತೋರಿಸುತ್ತಾರೆ. ಇದರಿಂದತಿಳಿಯುವ ವಿಷಯವೆಂದರೆ ಚಿನ್ನದ ಶೋಧನೆ ಮತ್ತು ಚಿನ್ನ ತೆಗೆಯುವ ಕೆಲಸದಲ್ಲಿ ಸ್ಥಳೀಯ ಬುಡಕಟ್ಟುಗಳ ಜನರು ತೊಡಗಿಕೊಂಡಿದ್ದರು ಎನ್ನುವುದು.
ಕೊನೆಗೂ ಸಿನೆಮಾದಲ್ಲಿ ಹತ್ತಾರು ಕಷ್ಟಗಳನ್ನು ಎದುರಿಸಿ ಸುರಂಗಗಳನ್ನು ಕಂಡುಹಿಡಿದು ಸುರಂಗಗಳ ಒಳಗೆ ಇಳಿದು ನೋಡುತ್ತಾರೆ. ಎಲ್ಲೆಲ್ಲೂ ಕ್ವಾಡ್ಝ್ ಸಿರಗಳಲ್ಲಿ ಹೊಳೆಯುವ ಚಿನ್ನದ ದೊಡ್ಡ ನಿಕ್ಷೇಪವೇ ಕಾಣಿಸಿಕೊಳ್ಳುತ್ತದೆ. ಸುರಂಗದಲ್ಲಿ ಚೋಳರಾಜ ಮತ್ತು ಟಿಪ್ಪು ಸುಲ್ತಾನ್ ಬಿಂಬಗಳನ್ನು ತೋರಿಸಲಾಗುತ್ತದೆ. ಅಂದರೆ ಇವರ ಕಾಲದಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎನ್ನುವುದು ಇದರ ಅರ್ಥ. ಇದಕ್ಕೆ ಪೂರಕದಂತೆ 1884ರಲ್ಲಿ ಜಾನ್ ಟೇಲರ್, ಗಣಿತತಜ್ಞ ಕ್ಯಾ. ಪ್ಲೂಮರ್ ಮತ್ತು ಡಬ್ಲ್ಯು. ಬೆಲ್‌ಡೇವಿಸ್‌ರನ್ನು ಕೆಜಿಎಫ್‌ಗೆ ಕರೆದುತಂದು ಚಿನ್ನದ ನಿಕ್ಷೇಪಗಳನ್ನು ಹುಡುಕುತ್ತಾ ಶ್ಯಾಫ್ಟ್ ಗಳನ್ನು ತೋಡಿದಾಗ 300 ಅಡಿಗಳ ಕೆಳಗೆ ಚಿನ್ನದ ನಿಕ್ಷೇಪ ಕಾಣಿಸಿಕೊಳ್ಳುತ್ತದೆೆ. ಇಲ್ಲಿ ದೊರಕಿದ ಮಡಿಕೆ ಕುಡಿಕೆಗಳನ್ನು ಕಾರ್ಬನ್ ಡೇಟಿಂಗ್ ಮಾಡಿಸಿದಾಗ ಅವು 1600-1900 ವರ್ಷಗಳ ಹಿಂದಿನದಾಗಿರುತ್ತವೆ. ಇನ್ನೊಂದು ವಿಷಯವೆಂದರೆ ಸಿಂದೂ ನಾಗರಿಕ ತೊಟ್ಟಿಲುಗಳಲ್ಲಿ ದೊರಕಿದ ಚಿನ್ನದ ನಾಣ್ಯಗಳನ್ನು ಕೆಜಿಎಫ್ ಮತ್ತು ಹಟ್ಟಿ (ರಾಯಚೂರು ಜಿಲ್ಲೆ) ಚಿನ್ನದ ಜೊತೆಗೆ ಹೋಲಿಕೆ ಮಾಡಿ ನೋಡಿದ ಇತಿಹಾಸಕಾರರಾದ ಪ್ರೊ.ಆಲ್ಚಿನ್ ಮತ್ತು ಎಸ್.ಆರ್.ರಾವ್ ಅವರು ಈ ನಾಣ್ಯಗಳು ಕೆಜಿಎಫ್ ಮತ್ತು ಹಟ್ಟಿ ಗಣಿಗಳಿಗೆ ಸೇರಿದೆ ಎಂಬ ವಿಷಯವನ್ನು ಎತ್ತಿಹಿಡಿದಿದ್ದಾರೆ. ಇದನ್ನೇ ತಂಗಾಲನ್ ಸಿನೆಮಾದ ಕೊನೆಯಲ್ಲಿ ತೋರಿಸಲಾಗಿದೆ. ಸಿನೆಮಾದಲ್ಲಿ ಕ್ಲೆಮೆಂಟ್ ಕೊನೆಗೆ ಇದೆಲ್ಲ ನನಗೆ ಸೇರಬೇಕು. ನೀವೆಲ್ಲ ಕೂಲಿಯಾಳುಗಳಾಗಿ ದುಡಿಯಬೇಕು ಎಂದು ಕೂಗಾಡುತ್ತಾನೆ. ತಂಗಲಾನ್ ಮತ್ತು ಅವನ ಜನರು ಮತ್ತು ಕ್ಲೆಮೆಂಟ್ ನಡುವೆ ಜಗಳ ನಡೆದು ಕ್ಲೆಮೆಂಟ್‌ನನ್ನು ಸಾಯಿಸಲಾಗುತ್ತದೆ. ತಂಗಲಾನ್ ಇದೆಲ್ಲವೂ ನಮ್ಮದೇ ನಮಗೆ ಮಾತ್ರ ಸೇರಿದ್ದು ಎಂದು ಹೇಳುತ್ತಾನೆ. ಅಲ್ಲಿಗೆ ಸಿನೆಮಾ ಮುಗಿಯುತ್ತದೆ. ಇದು ಸಿನಿಮಾದ ಕಥೆ.
ಆದರೆ ಪಾ.ರಂಜಿತ್ ಸಿನೆಮಾದಲ್ಲಿ ಬೀಭತ್ಸವಾದ ಹೋರಾಟಗಳನ್ನು ಸೇರಿಸಿಕೊಂಡಿದ್ದಾರೆ. ತಂಗಲಾನ್ ಮತ್ತು ಆರತಿ ಜೊತೆಗೆ ಯುದ್ಧ ನಡೆದಾಗ ತಂಗಲಾನ್ ಭರ್ಜಿಯಿಂದ ಆರತಿ ಹೊಟ್ಟೆ ಸೀಳಿಕೊಂಡು ರಕ್ತ ನದಿಯಂತೆ ಹರಿದುಬರುತ್ತದೆ.
ಆ ರಕ್ತ ಹರಿದುಹೋಗುವ ಸ್ಥಳದಲ್ಲಿ ಚಿನ್ನ ಕಾಣಿಸಿಕೊಳ್ಳುತ್ತದೆ. ಇದರ ನಡುವೆ ಬುದ್ಧನ ಮೂರ್ತಿಯೊಂದು ಬೆಟ್ಟದ ಮೇಲೆ ಕಾಣಿಸುತ್ತದೆ. ಅದರ ಶಿರವನ್ನು ಸ್ಥಳೀಯ ರಾಜನು ಕತ್ತರಿಸುತ್ತಾನೆ. ಅದೂ ಕೂಡ ಒಂದು ರೂಪಕವಾಗಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಇಂತಹ ಹಲವಾರು ರೂಪಕಗಳು ಮತ್ತು ಚಿನ್ನದ ಹುಡುಕಾಟದ ಹಿಂದಿನ ವೈಜ್ಞಾನಿ ಕತೆಗಳು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟವೇನೋ? ಎರಡು ಸಿನೆಮಾಗಳ ಸ್ಟಪ್‌ಅನ್ನು ಒಂದೇ ಸಿನೆಮಾದಲ್ಲಿ ತುರುಕಲಾಗಿದೆ. ಜೊತೆಗೆ ಸಿನೆಮಾದಲ್ಲಿ ಉದ್ದಕ್ಕೂ ಅನಗತ್ಯವೆಂಬಂತೆ ಭಾರೀ ಹೊಡೆದಾಟಗಳನ್ನು ಚಿತ್ರಿಸಲಾಗಿದೆ. ಇಂತಹ ಕೆಲವು ತೊಡಕುಗಳನ್ನು ನಿಭಾಯಿಸಿಕೊಂಡು ಸಿನೆಮಾ ದೃಶ್ಯಗಳನ್ನು ಸರಿಯಾಗಿ ಪೋಣಿಸಿದ್ದರೆ ಇದೊಂದು ಅದ್ಭುತ ಮಾಸ್ಟರ್ ಪೀಸ್ ಆಗಬಹುದಿತ್ತೇನೋ! ಇನ್ನೊಂದು ವಿಷಯ ಕೊನೆಯಲ್ಲಿ ಬರುವ ಟೈಟಲ್ ಕಾರ್ಡ್‌ನಲ್ಲಿ ಚಿನ್ನದ ಗಣಿಗಳ ಕೆಲವು ಫೋಟೊ ಸ್ಲೈಡ್‌ಗಳನ್ನು ತೋರಿಸಲಾಗುತ್ತದೆ. ಅದರಲ್ಲಿ ಬರುವ ಗಣಿ ಕಾರ್ಮಿಕರ ಮುಖಗಳನ್ನು ಹೋಲುವಂತೆ ಸಿನೆಮಾ ನಟರನ್ನು ಹುಡುಕಿ ಅವರಿಗೆ ಅದೇ ರೀತಿಯ ಮೇಕಪ್ ಮಾಡಲಾಗಿದೆ. ಅಂದರೆ ಸಿನೆಮಾ ತೆಗೆಯುವ ಮುನ್ನ ಪಾ.ರಂಜಿತ್ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.