ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಚಿತ್ರ ವಿವಾದ: ನಿರ್ದೇಶಕರ ಹೆಸರು ಬಳಸಲು ಹೈಕೋರ್ಟ್ ನಿರ್ದೇಶನ
Photo credit: filmibeat.com
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್ʼ ಚಿತ್ರದ ಪೋಸ್ಟರ್ ಮತ್ತಿತರ ಪ್ರಚಾರ ದಾಖಲೆಗಳಲ್ಲಿ ನಿರ್ದೇಶಕ ಎ ಪಿ ಅರ್ಜುನ್ ಫಿಲ್ಮ್ ಎಂಬ ಟ್ಯಾಗ್ಲೈನ್ ಬಳಕೆ ಮಾಡಲು ಹೈಕೋರ್ಟ್ ನಿರ್ಮಾಪಕಕರಿಗೆ ನಿರ್ದೇಶನ ನೀಡಿದೆ.
ಚಿತ್ರ ನಿರ್ದೇಶಕ ಬೆಂಗಳೂರಿನ ಎ ಪಿ ಅರ್ಜುನ್ ಸಲ್ಲಿಸಿದ್ದ ವಾಣಿಜ್ಯ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಮತ್ತು ಎಂ.ಜಿ.ಉಮಾ ಅವರಿದ್ದ ರಜಾಕಾಲದ ಪೀಠ ವಿಚಾರಣೆ ನಡೆಸಿ ನಿರ್ದೇಶಕ ಎ ಪಿ ಅರ್ಜುನ್ ಫಿಲ್ಮ್ ಎಂಬ ಟ್ಯಾಗ್ಲೈನ್ ಬಳಸಬೇಕು.ಅಲ್ಲದೆ ನಿರ್ದೇಶಕರನ್ನು ಚಿತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಚಿತ್ರ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ.
ಈಗಾಗಲೇ ಮುದ್ರಿಸಿರುವುದನ್ನು ಹೊರತುಪಡಿಸಿ ಮುಂದೆ ಮುದ್ರಿಸುವ ಮಾರ್ಟಿನ್ ಚಿತ್ರದ ಪೋಸ್ಟರ್ ಮತ್ತು ಪ್ರಚಾರ ದಾಖಲೆಗಳಲ್ಲಿ 'ಎ ಪಿ ಅರ್ಜುನ್ ಫಿಲ್ಮ್ʼ ಎಂಬ ಟ್ಯಾಗ್ಲೈನ್ ಹಾಕಬೇಕು. ಸಿನಿಮಾದ ಪ್ರಚಾರ ಚಟುವಟಿಕೆಗಳಿಗೆ ಎ ಪಿ ಅರ್ಜುನ್ಗೆ ಅವಕಾಶ ಮಾಡಿಕೊಡಬೇಕು. ಪ್ರಚಾರ ಚಟುವಟಿಕೆ ವೇಳೆ ಅರ್ಜುನ್ ಚಿತ್ರ ಮತ್ತು ತಂಡದ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ನ್ಯಾಯಾಲಯವು ಆದೇಶಿಸಿದೆ.
ಪ್ರತಿವಾದಿಗಳಾದ ಚಿತ್ರ ನಿರ್ಮಾಣ ಸಂಸ್ಥೆಗಳಾದ ವಾಸವಿ ಎಂಟರ್ಪ್ರೈಸಸ್, ಅದರ ಪಾಲುದಾರರಾದ ಉದಯ್ ಮತ್ತು ವಾಸವಿ ಮೆಹ್ತಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಕ್ಟೋಬರ್ 14ಕ್ಕೆ ವಿಚಾರಣೆ ಮುಂದೂಡಿದೆ.